ಬೆಂಗಳೂರು: ಬಿಎಂಟಿಸಿ ಚಾಲನಾ ಸಿಬ್ಬಂದಿಯಿಂದ ಲಂಚ ಪಡೆದ ಆರೋಪದ ಮೇಲೆ ಬಿಎಂಟಿಸಿ ಬನಶಂಕರಿ ಘಟಕದ (20ನೇ ಘಟಕ) 10 ಮಂದಿಯನ್ನು ಅಮಾನತು ಮಾಡಲಾಗಿದೆ.
ರಜೆಗಾಗಿ ಲಂಚ ಪಡೆದ ವಿಡಿಯೊ ಹರಿದಾಡಿದ್ದ ಹಿನ್ನೆಲೆಯಲ್ಲಿ ಬಿಎಂಟಿಸಿ ಭದ್ರತಾ ಹಾಗೂ ಜಾಗೃತಾಧಿಕಾರಿಗಳು ತನಖೆ ನಡೆಸಿ ವರದಿ ನೀಡಿದ್ದರು.
ಈ ವರದಿಯ ಆಧಾರದಲ್ಲಿ ಕಿರಿಯ ಸಹಾಯಕರಾದ ಪವನ್ ಕುಮಾರ್ ಎಂ, ಮಹೇಶ್ ವಿ, ಮದನ್ ಕುಮಾರ್, ಅರುಣ್ ಕುಮಾರ್, ವೀರೇಶ್, ರಾಕೇಶ್, ಸಹಾಯಕ ಉಗ್ರಾಣ ಪಾಲಕ ರಘುವರನ್, ಸಹಾಯಕ ಲೆಕ್ಕಿಗ ಸತೀಶ್ ಪತ್ತಾರ್, 33ನೇ ಘಟಕದ ಕೆಎಸ್ಟಿ ಕಾನ್ಸ್ಟೆಬಲ್ ಆರ್.ಡಿ. ಸಂತೋಷ್ ಕುಮಾರ್, ಪಿ. ಮಂಜುನಾಥ್ ಅವರನ್ನು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ ಜಿ ಅವರು ಅಮಾನತು ಮಾಡಿದ್ದಾರೆ.
ಚಾಲನಾ ಸಿಬ್ಬಂದಿಯಿಂದ ಮಹೇಶ್ ಎಂ. ಲಂಚ ಪಡೆಯುತ್ತಿದ್ದ ವಿಡಿಯೊ ಹರಿದಾಡಿತ್ತು. ತನಿಖೆ ನಡೆಸಿದಾಗ ಪವನ್ ಕುಮಾರ್ ಎಂ, ಮಹೇಶ್ ಎಂ ಅವರು ಬಿಟ್ಕಾಯಿನ್ನಲ್ಲಿ ಆನ್ಲೈನ್ ಇನ್ವೆಸ್ಟ್ಮೆಂಟ್ ವಾಟ್ಸ್ಆಯಪ್ ಗ್ರೂಪ್ ಅಡ್ಮಿನ್ಗಳಾಗಿ ಇತರರನ್ನೂ ಈ ದಂಧೆಯಲ್ಲಿ ತೊಡಗಿಸಲು ಪ್ರಚೋದಿಸಿರುವುದು ಪತ್ತೆಯಾಗಿತ್ತು. ಆರೋಪಿಗಳು ವಿವಿಧ ಬ್ಯಾಂಕ್ ಖಾತೆಗಳಿಗೆ 4.47 ಲಕ್ಷ ಜಮಾ ಮಾಡಿರುವುದು ಕೂಡ ಪತ್ತೆಯಾಗಿತ್ತು ಎಂದು ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.