ಮುದಗಲ್ಲ :- ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಕನಸಿನ ಯೋಜನೆಯಾದ ಇಂದಿರಾ ಕ್ಯಾಂಟೀನ್ ಐತಿಹಾಸಿಕ ಮುದಗಲ್ಲ ಪಟ್ಟಣದಲ್ಲಿ ಆರಂಭಗೊಳ್ಳಲು ಮುಹೂರ್ತ ಇನ್ನೂ ಕೂಡಿ ಬಂದಿಲ್ಲ.
ಆಟೊ, ಟ್ಯಾಕ್ಸಿ ಚಾಲಕರು, ಬೀದಿಬದಿ ವ್ಯಾಪಾರಿಗಳು, ಕೂಲಿ ಕಾರ್ಮಿಕರು, ನಿರ್ಗತಿಕರಿಗೆ ಊಟ, ತಿಂಡಿ ಅತೀ ಕಡಿಮೆ ವೆಚ್ಚದಲ್ಲಿ ಲಭ್ಯವಾಗಲೆಂಬ ಉದ್ದೇಶದಿಂದ 2017ರ ಆ. 16ರಂದು ಇಂದಿರಾ ಕ್ಯಾಂಟೀನ್‌ಗಳನ್ನು ರಾಜ್ಯದಲ್ಲಿ ಆರಂಭಿಸಲಾಯಿತು. ಆದರೆ ಮುದಗಲ್ಲ ಪಟ್ಟಿಯಲ್ಲಿ ಜನತೆಗೆ ಇನ್ನೂ ಈ ಯೋಜನೆ ಮರೀಚಿಕೆ ಆಗಿಯೇ ಉಳಿದಿದೆ.
ಲಿಂಗಸೂರು ತಾಲೂಕಿನ ಐತಿಹಾಸಿಕ ಮುದಗಲ್ಲ ಪಟ್ಟಣದ ಮುಖ್ಯ ಕೇಂದ್ರ ಬಿಂದುವಾದ ಪಶು ವೈದ್ಯಕಿಯ ಆಸ್ಪತ್ರೆ ಮುಂಭಾಗದಲ್ಲಿ ನಿರ್ಮಾಣವಾಗಿರುವ ರಾಜ್ಯ ಸರ್ಕಾರದ ಮಹತ್ವ ಪೂರ್ಣ ಯೋಜನೆ ಇಂದಿರಾ ಕ್ಯಾಂಟೀನ್ ಇನ್ನೂ ಉದ್ಘಾಟನೆಗೊಂಡಿಲ್ಲ. ಅಧಿಕಾರಿಗಳು ಹಾಗೂ ಜನಪ್ರತಿ ನಿಧಿಗಳು ಈ ಬಗ್ಗೆ ತಲೆಕೆಡಿಕೊಳ್ಳದೆ ಇರೋದ್ರಿಂದ ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ ಎಂಬಂತಾಗಿದೆ.
ಬಡವರು ಮತ್ತು ಕಾರ್ಮಿಕರಿಗಾಗಿ ಇಂದಿನ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಇಂದಿರಾ ಕ್ಯಾಂಟೀನ್ ಮುದಗಲ್ಲ ಪಟ್ಟಣದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆಯಾದ್ರೂ ಇನ್ನೂ ಉದ್ಘಾಟನೆಗೊಂಡಿಲ್ಲ.
ಪ್ರತಿ ಕ್ಯಾಂಟೀನ್ ನಿಂದ ಒಂದು ಅವಧಿಗೆ ಗರಿಷ್ಠ 250 ಜನರಿಗೆ 5 ರೂ.ಗೆ ಉಪಹಾರ, 10 ರೂ.ಗೆ ಊಟ ದೊರೆಯಲಿದೆ.
ಆದರೆ, ಜನಪ್ರತಿನಿಧಿಗಳ ನಿರ್ಲಕ್ಷ್ಯ ಹಾಗೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಇಂದಿರಾ ಕ್ಯಾಂಟಿನ್ ಉದ್ಘಾಟನೆ ಆಗುತ್ತಿಲ್ಲ. ಕ್ಯಾಂಟೀನ್ ಕಾಮಗಾರಿ ಪೂರ್ಣ ವಾಗಿದ್ದು, ಆದರೆ ಉದ್ಘಾಟನೆ ಮಾಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದು ಯಾಕೆ? ಎಂಬುದು ಗೊತ್ತಾಗುತ್ತಿಲ್ಲ ಎನ್ನುತ್ತಾರೆ ಸ್ಥಳೀಯರು.
ವರದಿ:- ಮಂಜುನಾಥ ಕುಂಬಾರ