Join The Telegram | Join The WhatsApp |
ನವದೆಹಲಿ : ಗುಜರಾತ್‌ನ ಮೊರ್ಬಿಯಲ್ಲಿ ಸಂಭವಿಸಿದ ತೂಗು ಸೇತುವೆ ಕುಸಿದು ಬಿದ್ದ ಘಟನೆಗೆ ಇದುವರೆಗೆ 135 ಜನರು ಸಾವನ್ನಪ್ಪಿದ್ದಾರೆ. ಮೋರ್ಬಿ ಸೇತುವೆ ಅಪಘಾತದ ನಂತರ, ಈ ದುರಂತಕ್ಕೆ ಕಾರಣವಾದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಾಣ ಕಳೆದುಕೊಂಡವರ ಕುಟುಂಬಗಳು ಆಕ್ರೋಶದ ಮಾತುಗಳನ್ನಾಡುತ್ತಿವೆ. ತಪ್ಪಿತಸ್ಥರ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ. ಪ್ರಕರಣದಲ್ಲಿ ಈವರೆಗೂ 9 ಮಂದಿಯನ್ನು ಬಂಧಿಸಲಾಗಿದೆ. ಭಾರತದಲ್ಲಿ, ಇಂಥ ಪ್ರಕರಣಗಳಾದ ಕಠಿಣ ಶಿಕ್ಷೆಯ ಉದಾಹರಣೆಗಳು ಕಂಡುಬರುವುದು ಬಹಳ ವಿರಳ. ತನಿಖೆಯ ಹೆಸರಿನಲ್ಲಿ ಸಮಿತಿಗಳನ್ನು ರಚಿಸಲಾಗುತ್ತದೆ. ಆದರೆ ಕಮ್ಯುನಿಸ್ಟ್ ಚೀನಾದಲ್ಲಿ ನಡೆದ ಇಂಥದ್ದೇ ಪ್ರಕರಣದಲ್ಲಿ ಒಬ್ಬ ವ್ಯಕ್ತಿಗೆ ಮರಣದಂಡನೆ ವಿಧಿಸಲಾಗಿತ್ತು. ಆದರೆ, ಈ ಪ್ರಕರಣವು ಸುಮಾರು 23 ವರ್ಷಗಳ ಹಿಂದಿನದು. ಚೀನಾದ ನಗರದಲ್ಲಿ ಸೇತುವೆ ಕುಸಿದು 40 ಜನರು ಸಾವು ಕಂಡಿದ್ದರು. ಚೀನಾ ಈ ವಿಷಯದ ಬಗ್ಗೆ ಅಮೂಲಾಗ್ರವಾಗಿ ತನಿಖೆ ನಡೆಸಿದಾಗ, ಇಡೀ ಸೇತುವೆಯಲ್ಲಿ ನಡೆದ ಭ್ರಷ್ಟಾಚಾರಕ್ಕೆ ಒಬ್ಬ ವ್ಯಕ್ತಿ ಮೂಲ ಎಂದು ಗುರುತಿಸಲಾಯಿತು. ಆತನನ್ನು ಕೋರ್ಟ್ ಅಪರಾಧಿ ಎಂದು ಘೋಷಣೆ ಮಾಡಿದ್ದು ಮಾತ್ರವಲ್ಲದೆ, 40 ಜನರ ಸಾವಿಗೆ ಕಾರಣವಾದ ವ್ಯಕ್ತಿಗೆ ಮರಣದಂಡನೆ ವಿಧಿಸಿತ್ತು.
ಇನ್ನು ಭಾರತದಲ್ಲಿ ಸಂಭವಿಸಿದ ಮೊರ್ಬಿ ಘಟನೆಯ ಬಗ್ಗೆ ಮಾತನಾಡುವುದಾದರೆ, ಈವರೆಗೂ 9 ಮಂದಿಯನ್ನು ಮಾತ್ರ ಬಂಧಿಸಲಾಗಿದೆ. ಇವರಲ್ಲಿ ಹೆಚ್ಚಿನವರು ಈ ಸೇತುವೆಯ ದುರಸ್ತಿಗೆ ಸಂಬಂಧಿಸಿದವರು. ಇವರಲ್ಲಿ ಒರೆವಾ ಗ್ರೂಪ್‌ನ ಇಬ್ಬರು ವ್ಯವಸ್ಥಾಪಕರು ಮತ್ತು ಸೇತುವೆಯನ್ನು ದುರಸ್ತಿ ಮಾಡಿದ ಇಬ್ಬರು ಗುತ್ತಿಗೆದಾರರು ಸೇರಿದ್ದಾರೆ.ನ್ಯಾಯಾಲಯ ಅವರನ್ನು ಶನಿವಾರದವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ. ಇನ್ನು ಐವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಚೀನಾದಲ್ಲಿ ನಡೆದಿತ್ತು ರೈನ್‌ಬೋ ಬ್ರಿಜ್ ದುರಂತ: 1999ರ ಜನವರಿ 4 ರಂದು ಚೀನಾದ ಕಿಜಿಯಾಂಗ್ ಕೌಂಟಿಯಲ್ಲಿ ರೈನ್ ಬೋ ಸೇತುವೆ ಕುಸಿದಿತ್ತು. ಕೇವಲ ಮೂರು ವರ್ಷಗಳ ಹಿಂದೆ 180 ಮೀಟರ್ ಉದ್ದದ ಸೇತುವೆಯನ್ನು ನಿರ್ಮಾಣ ಮಾಡಲಾಗಿತ್ತು. ಇದರಲ್ಲಿ ಒಟ್ಟು 40 ಮಂದಿ ಸಾವು ಕಂಡಿದ್ದರು. ಚೀನಾದ ಏಜೆನ್ಸಿಗಳು ಈ ಸೇತುವೆಯ ಅಪಘಾತವನ್ನು ತನಿಖೆ ಮಾಡಿದಾಗ, ಅದರ ನಿರ್ಮಾಣದಲ್ಲಿ ಅನೇಕ ನ್ಯೂನತೆಗಳು ಬಹಿರಂಗಗೊಂಡಿದ್ದವು. ಸೇತುವೆಯ ನಿರ್ಮಾಣದಲ್ಲಿ ಕಳಪೆ ಗುಣಮಟ್ಟದ ಉಕ್ಕನ್ನು ಬಳಸಲಾಗಿತ್ತು ಎನ್ನುವುದು ತನಿಖೆಯ ಬಹಿಳ ತಿಳಿದುಬಂದಿತ್ತು. ಅಲ್ಲದೆ ಇತರೆ ಸಾಮಗ್ರಿಗಳು ಕಳಪೆ ಗುಣಮಟ್ಟದ್ದಾಗಿದ್ದವು. ಉಕ್ಕಿನ ಗುಣಮಟ್ಟ ಕಳಪೆಯಾಗಿತ್ತು ಮತ್ತು ನಿರ್ಮಾಣದ ಸಮಯದಲ್ಲಿ ಎಂಜಿನಿಯರಿಂಗ್ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ನಿರ್ಲಕ್ಷ್ಯ ಕಂಡುಬಂದಿತ್ತು.
ಕೋರ್ಟ್ ಕಲಾಪ ಸಂಪೂರ್ಣ ನೇರಪ್ರಸಾರ: ಈ ಪ್ರಕರಣವನ್ನು ಉದಾಹರಣೆಯನ್ನಾಗಿ ನೀಡಲು, ಚೀನಾ ಈ ಪ್ರಕರಣದ ನ್ಯಾಯಾಲಯದ ವಿಚಾರಣೆಯನ್ನು ರಾಷ್ಟ್ರೀಯವಾಗಿ ಪ್ರಸಾರ ಮಾಡಿತು. ಈ ಪ್ರಕರಣದಲ್ಲಿ, ಕಮ್ಯುನಿಸ್ಟ್ ಪಕ್ಷದ ಅಧಿಕಾರಿಯೊಬ್ಬರಿಗೆ ಮರಣದಂಡನೆ ವಿಧಿಸಲಾಯಿತು ಮತ್ತು ಇತರ ಅಪರಾಧಿಗಳಿಗೆ 3 ರಿಂದ 13 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಶಿಕ್ಷೆಗೊಳಗಾದವರಲ್ಲಿ ಗುತ್ತಿಗೆದಾರರು, ಎಂಜಿನಿಯರ್‌ಗಳು, ವಸ್ತು ಪೂರೈಕೆದಾರರು ಮತ್ತು ಹಲವಾರು ಸರ್ಕಾರಿ ಅಧಿಕಾರಿಗಳು ಸೇರಿದ್ದರು. ನ್ಯಾಯಾಲಯವು 37 ವರ್ಷದ ಲಿನ್ ಶಿಯುವಾನ್‌ಗೆ ಮರಣದಂಡನೆ ವಿಧಿಸಿತು, ಲಂಚವನ್ನು ತೆಗೆದುಕೊಂಡಿದ್ದಕ್ಕಾಗಿ ಆತನನ್ನು ತಪ್ಪಿತಸ್ಥ ಎನ್ನಲಾಗಿತ್ತು. ಈ ವಿಚಾರಣೆಯು ಚಾಂಗ್‌ಕಿಂಗ್‌ನ ಪೀಪಲ್ಸ್ ಕೋರ್ಟ್‌ನಲ್ಲಿ ನಡೆಯಿತು.
ಬಾಲ್ಯದ ಗೆಳೆಯನಿಗೆ ಗುತ್ತಿಗೆ ನೀಡಿದ್ದ: ಚೀನಾದ ಸರ್ಕಾರಿ ಮಾಧ್ಯಮದ ವರದಿಯ ಪ್ರಕಾರ, ಈ ಸಂದರ್ಭದಲ್ಲಿ 12,000 ಅಮೆರಿಕನ್ ಡಾಲರ್ ಲಂಚವನ್ನು ಪಡೆದು ಲಿನ್ ತನ್ನ ಬಾಲ್ಯದ ಗೆಳೆಯನಿಗೆ ಸೇತುವೆಯನ್ನು ನಿರ್ಮಿಸುವ ಗುತ್ತಿಗೆಯನ್ನು ನೀಡಿದ್ದ. ದೇಶದಲ್ಲಿ ದೊಡ್ಡ ದೊಡ್ಡ ಪ್ರಮಾಣದಲ್ಲಿ ಸೇತುವೆಗಳನ್ನು ನಿರ್ಮಿಸುತ್ತಿದ್ದಾಗ ಈ ಘಟನೆ ಸಂಭವಿಸಿತ್ತು. ಈ ಸೇತುವೆ ಅಫಘಾತದ ಬಳಿಕ ಚೀನಾ ಹಾಗೂ ಅದರ ಕಳಪೆ ಉತ್ಪನ್ನಗಳ ಬಗ್ಗೆ ವಿಶ್ವದಾದ್ಯಂತ ಟೀಕೆ ಮಾಡಲಾಗಿತ್ತು. ಚಾಂಗ್‌ಕಿಂಗ್ ನ್ಯಾಯಾಲಯದ ತೀರ್ಪಿನಲ್ಲಿ, ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದ ಕಿಜಿಯಾಂಗ್ ಕೌಂಟಿ ಸಮಿತಿಯ ಮಾಜಿ ಉಪ ಕಾರ್ಯದರ್ಶಿ ಲಿನ್ ಶಿಯುವಾನ್ ಅಪಘಾತದಲ್ಲಿ ಭಾಗಿಯಾಗಿದ್ದಕ್ಕಾಗಿ ಮರಣದಂಡನೆಗೆ ಗುರಿಯಾದರು.
Join The Telegram | Join The WhatsApp |