Join The Telegram | Join The WhatsApp |
ಮಂಡ್ಯ: ‘ದೇಶದಲ್ಲಿ ಅಗಾಧವಾದ ಹಳೆಯ ಜಾನಪದ ಸಂಪತ್ತು ಜೀವಂತವಾಗಿದ್ದು, ಅದಕ್ಕೆ ಸಾವಿಲ್ಲ. ಹೊಸ ಜಾನಪದ ಇಲ್ಲಿಯವರೆಗೂ ಸೃಷ್ಟಿಯಾಗಿಲ್ಲ. ಹೊಸದಾಗಿ ಜಾನಪದ ಸೃಷ್ಟಿಯಾದರೆ ಅದರ ಸ್ವರೂಪ ಹೇಗಿರಲಿದೆ ಎಂಬ ಕಲ್ಪನೆ ಯಾರಿಗೂ ಇಲ್ಲ. ಹೀಗಾಗಿ ನಾವು ಇರುವ ಜಾನಪದವನ್ನು ಉಳಿಸಿ, ಬೆಳೆಸಬೇಕಾಗಿದೆ’ ಎಂದು ಜಾನಪದ ವಿದ್ವಾಂಸ, ವಿಮರ್ಶಕ ಡಾ.ರಾಮೇಗೌಡ (ರಾಗೌ) ಹೇಳಿದರು.
ಕರ್ನಾಟಕ ಜಾನಪದ ಪರಿಷತ್ ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಆರಂಭವಾದ ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅವರು ಮಾತನಾಡಿದರು.
‘ಸದ್ಯದ ಪರಿಸ್ಥಿತಿಯಲ್ಲಿ ಜಾನಪದಕ್ಕೆ ಅಳಿವು– ಉಳಿವಿನ ಪ್ರಶ್ನೆ ಎದುರಾಗಿದೆ. ಜಾನಪದಕ್ಕೆ ಎಂದಿಗೂ ಸಾವಿಲ್ಲ, ಅದು ಅವಿನಾಶಿಯಾದುದು ಎಂಬುದನ್ನು ನಾವು ಒಪ್ಪಲೇಬೇಕು. ಜಾನಪದದ ವ್ಯಾಪ್ತಿಯನ್ನು ಸಮರ್ಪಕವಾಗಿ ನಿರ್ಧರಿಸದ ಕಾರಣ ಕಂಡದ್ದೆಲ್ಲವನ್ನೂ ಜಾನಪದ ಎಂದು ವಿಶ್ಲೇಷಿಸುವ ಪರಿಸ್ಥಿತಿ ಬಂದಿದೆ. ಕಲೆಗಳ ನಾಶದ ಪ್ರಶ್ನೆ ಮೊದಲಿನಿಂದಲೂ ಚರ್ಚೆಯಾಗುತ್ತಿದೆ. ಜಾನಪದವು ಸಂಸ್ಕೃತಿಯ ಭಾಗವಾಗಿರುವ ಕಾರಣ ಅದು ನಾಶ ಹೊಂದಲು ಸಾಧ್ಯವಿಲ್ಲ’ ಎಂದರು.
‘ಕನ್ನಡ ಜಾನಪದ ಕ್ಷೇತ್ರದಲ್ಲಿ ಅತಿ ಹೆಚ್ಚು ಮುದ್ರಣ ಕಂಡಿರುವ ಕೃತಿಗಳಲ್ಲಿ ‘ಗರತಿ ಹಾಡು’ ಪ್ರಮುಖವಾದುದು. ಇಂಥ ಕೃತಿ ಪ್ರಕಟಣೆಗೆ ಕಾರಣರಾದ ಹಲಸಂಗಿ ಗೆಳೆಯರನ್ನು ಅಭಿನಂದಿಸಬೇಕು. ಜಾನಪದ ಅಧ್ಯಯನ ಕನ್ನಡದ ಮಟ್ಟಿಗೆ ನವೋದಯ ಕಾಲದ ಲೇಖಕರಿಂದ ಆರಂಭವಾಯಿತು ಎಂಬುದನ್ನು ಮರೆಯಬಾರದು. ಇದು ಅಧ್ಯಯನ ವಿಷಯವಾಗಿದ್ದೇ ಸಾಹಿತ್ಯಕ ದೃಷ್ಟಿಯಿಂದ. ಹೀಗಾಗಿ ಜನಪದ ಅಧ್ಯಯನದಲ್ಲಿ ಯುವಜನರಿಗೆ ಭವಿಷ್ಯ ಸಿಗಬೇಕು’ ಎಂದರು
ವರದಿ: ಮಂಜುನಾಥ ಕುಂಬಾರ
Join The Telegram | Join The WhatsApp |