ಮುಂಬೈ: ಮಹಾರಾಷ್ಟ್ರದಲ್ಲಿ ಮಂಗಳವಾರ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆ ಧ್ವಂಸಗೊಳಿಸಿದ ಹಿನ್ನೆಲೆಯಲ್ಲಿ ಇಂದು ಪರ್ಭಾನಿ ನಗರದಲ್ಲಿ ಬಂದ್‌ಗೆ ಕರೆ ನೀಡಲಾಗಿತ್ತು.
ಸಂವಿಧಾನಕ್ಕೆ ಅವಮಾನ ಮಾಡಿರುವುದನ್ನು ವಿರೋಧಿಸಿ ಮಹಾರಾಷ್ಟ್ರದ ಪರ್ಭಾನಿಯಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಈ ನಡುವೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.
ಬುಧವಾರ ಮಧ್ಯಾಹ್ನ ಪ್ರತಿಭಟನಾಕಾರರು ಹಲವು ಪ್ರದೇಶಗಳಿಗೆ ಬೆಂಕಿ ಹಚ್ಚಿದ್ದಾರೆ. ಪರ್ಬಾನಿ ನಗರದಲ್ಲಿ ಕಲ್ಲುತೂರಾಟವೂ ನಡೆದಿದೆ. ಆಕ್ರೋಶಗೊಂಡ ಜನರು ವಾಹನಗಳಿಗೆ, ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಹಚ್ಚಲು ಆರಂಭಿಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ.
ವರದಿಗಳ ಪ್ರಕಾರ ಮಹಾರಾಷ್ಟ್ರದ ಪರ್ಭಾನಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಹೆದ್ದಾರಿ ಬಳಿ ಇರುವ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಯ ಮುಂಭಾಗ ಭಾರತೀಯ ಸಂವಿಧಾನದ ಪ್ರತಿಕೃತಿಯನ್ನು ಇಡಲಾಗಿತ್ತು. ಮಂಗಳವಾರ ಸಂಜೆ 4:30ರ ಸುಮಾರಿಗೆ ದುಷ್ಕರ್ಮಿಗಳು ಸಂವಿಧಾನದ ಪ್ರತಿಕೃತಿಯನ್ನು ವಿರೂಪಗೊಳಿಸಿದ್ದಾರೆ.
ತಕ್ಷಣ ಸ್ಥಳೀಯರು ಸಂವಿಧಾನಕ್ಕೆ ಅಪಮಾನ ಮಾಡಿದ ವ್ಯಕ್ತಿಯನ್ನು ಹಿಡಿದಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಮೊಂಡಾದ ಪೊಲೀಸರು ಸ್ಥಳಕ್ಕೆ ಆಗಮಿಸಿ ಈ ಕೃತ್ಯ ಎಸಗಿದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆದರೆ ಇಷ್ಟಕ್ಕೆ ಜನರು ಸುಮ್ಮನಾಗದೆ ಈ ಘಟನೆಯನ್ನು ವಿರೋಧಿಸಿ ಬೀದಿಗಿಳಿದು ಪ್ರತಿಭಟನೆ ನಡೆಸಿದರು.