ತುರುವೇಕೆರೆ:- ನಾಗರೀಕರ ತೆರಿಗೆ ಹಣದಲ್ಲಿ ನಮ್ಮ ಬದುಕು ನಡೆಯುತ್ತಿದೆ ಎಂಬುದನ್ನು ಸರ್ಕಾರಿ ನೌಕರರು ಮರೆಯಬಾರದು, ಭ್ರಷ್ಟಾಚಾರ, ಲಂಚಗುಳಿತನದಿಂದ ಹಣ ಸಂಪಾದನೆ ಮಾಡಿದರೆ ಕಾನೂನು ರೀತಿಯ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ವಲಿಭಾಷ ಎಚ್ಚರಿಸಿದರು.
ಪಟ್ಟಣದ ಕೆ.ಹಿರಣ್ಣಯ್ಯ ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಸಪ್ತಾಹದಲ್ಲಿ ಮಾತನಾಡಿದ ಅವರು, ಇಡೀ ವಿಶ್ವದಲ್ಲಿ ಭಾರತ ಭ್ರಷ್ಟಾಚಾರದಲ್ಲಿ 85 ನೇ ಸ್ಥಾನದಲ್ಲಿದೆ. ದೇಶದ ಅಭಿವೃದ್ದಿಗೆ ಜನಸಂಖ್ಯೆ ಮತ್ತು ಭ್ರಷ್ಟಾಚಾರ ಮಾರಕವಾಗಿ ಪರಿಣಮಿಸಿದೆ.
ಸರ್ಕಾರಿ ಅಧಿಕಾರಿಗಳು, ನೌಕರರು ಕಛೇರಿಯಲ್ಲಿ ಶಿಸ್ತು ಮತ್ತು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಜನಸಾಮಾನ್ಯರ ಕೆಲಸಗಳನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಶೀಘ್ರವಾಗಿ ಮಾಡಿಕೊಡಬೇಕು. ಲಂಚದ ಹಣಕ್ಕೆ ಕೈಚಾಚಿ ಲೋಕಾಯುಕ್ತ ಬಲೆಗೆ ಬಿದ್ದರೆ ನಿಮ್ಮ ಗೌರವ ಮಾತ್ರವಲ್ಲ ನಿಮ್ಮ ಕುಟುಂಬದ ಮರ್ಯಾದೆಯೂ ಬೀದಿಪಾಲಾಗುತ್ತದೆ ಎಂಬುದರ ಅರಿವು ನಿಮಗಿರಬೇಕಿದೆ.
ಅತಿ ಹೆಚ್ಚು ಭ್ರಷ್ಟಾಚಾರ ಸರ್ಕಾರಿ ಕಛೇರಿಗಳಲ್ಲೇ ನಡೆಯುತ್ತಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂgತಹ ಪರಿಸ್ಥಿತಿಯಾಗಿದೆ. ಭ್ರಷ್ಟಾಚಾರವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರಿ ನೌಕರರು ಮುಂದಾಗಬೇಕು. ಸಾರ್ವಜನಿಕರ ಋಣದಲ್ಲಿ ಅಂದರೆ ಅವರ ತೆರಿಗೆ ಹಣದಲ್ಲಿ ಜೀವನ ಸಾಗಿಸುತ್ತಿರುವ ಸರ್ಕಾರಿ ನೌಕರರಾದ ನಾವುಗಳು ಅವರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಬೇಕು ಎಂದರು.
ಲೋಕಾಯುಕ್ತ ಇನ್ಸ್ ಪೆಕ್ಟರ್ ಶಿವರುದ್ರಪ್ಪ ಮೇಟಿ ಮಾತನಾಡಿ, ಸರ್ಕಾರಿ ನೌಕರರಾದ ನಮಗೆ ನೆಮ್ಮದಿಯಾಗಿ ಜೀವನ ನಡೆಸುವಷ್ಟು ವೇತನವನ್ನು ಸರ್ಕಾರ ನೀಡುತ್ತಿದೆ. ಆದರೆ ನಾವು ನಮ್ಮ ಆದಾಯಕ್ಕಿಂತ ಹೆಚ್ಚಿನದನ್ನು ಸಂಪಾದಿಸಲು ಭ್ರಷ್ಟಾಚಾರದ ದಾರಿಯನ್ನು ಕಂಡುಕೊಳ್ಳುತ್ತಿರುವುದು ಅವಮಾನದ ಸಂಗತಿಯಾಗಿದೆ.
ನಿಷ್ಠೆ, ಪ್ರಾಮಾಣಿಕತೆ ನಮಗೆ ಪುಣ್ಯವನ್ನು ಒದಗಿಸಿದರೆ, ಭ್ರಷ್ಟಾಚಾರದ ಸಂಪಾದನೆ ಪಾಪದ ಫಲವಾಗಿರುತ್ತದೆ. ಕರ್ಮ ನಮ್ಮನ್ನು ಯಾವಾಗಲೂ ಹಿಂಬಾಲಿಸುತ್ತಿರುತ್ತದೆ. ನಾಗರೀಕರ ಕೆಲಸ ಮಾಡಿಕೊಡಲು ಲಂಚವನ್ನು ಹಣ ಅಥವಾ ಇನ್ನಾವುದೇ ರೀತಿಯಲ್ಲಿ ಪಡೆದರೂ ಕಾನೂನು ರೀತಿ ಅಪರಾಧವೇ ಆಗಿರುತ್ತದೆ.
ಇದಕ್ಕೆ ಶಿಕ್ಷೆ ಖಚಿತ. ಒಳ್ಳೆಯ ಕೆಲಸ ಮಾಡಿದರೆ ಜನ ಗೌರವದಿಂದ ಕಾಣುತ್ತಾರೆ, ಸತ್ತ ಮೇಲೂ ನೆನಪಿಟ್ಟುಕೊಳ್ಳುತ್ತಾರೆ. ಕೆಟ್ಟ ಕೆಲಸ ನಾವು ಸಾಯುವ ಮೊದಲೇ ನಮ್ಮನ್ನು ಸಾಯಿಸುತ್ತದೆ ಎಂಬುದನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕಿದೆ ಎಂದರು.
ಕೃಷ್ಣ ಕಾಲೇಜಿನ ಪ್ರಾಂಶುಪಾಲೆ ಡಾ.ವಿನೆಟ್ ವಿಮಲ ಮಾತನಾಡಿ, ಸಮಾಜದಲ್ಲಿ ಭ್ರಷ್ಟಾಚಾರದ ಬಗ್ಗೆ ಜಾಗೃತಿಯ ಕೊರತೆಯಿದೆ. ಸರ್ಕಾರಿ ನೌಕರರು ಲಂಚ ತೆಗೆದುಕೊಳ್ಳುವುದು ಎಷ್ಟು ತಪ್ಪೋ? ಜನತೆ ನೌಕರರಿಗೆ ಲಂಚ ಕೊಡುವುದೂ ಸಹ ಅಷ್ಟೇ ತಪ್ಪು? ಎಂಬುದರ ಅರಿವು ಜನಸಾಮಾನ್ಯರಿಗೆ ಬೇಕಿದೆ. ಭ್ರಷ್ಟಾಚಾರ, ಲಂಚಗುಳಿತನದ ಬಗ್ಗೆ ಜನರಿಗೆ ಅರಿವು ಮೂಡಿದಲ್ಲಿ ಭ್ರಷ್ಟಾಚಾರ ಮುಕ್ತ ಸಮಾಜದ ನಿರ್ಮಾಣ ಸಾಧ್ಯವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಸರ್ಕಾರಿ ಕಛೇರಿಗಳಲ್ಲಿ ಸಾರ್ವಜನಿಕ ಕೆಲಸಗಳನ್ನು ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಲ್ಲಿ, ಅರ್ಜಿಗಳ ವಿಲೇವಾರಿಗೆ ಅನಗತ್ಯ ವಿಳಂಬ, ಸರ್ಕಾರಿ ಹಣದ ದುರುಪಯೋಗ, ಕಳಪೆ ಕಾಮಗಾರಿ, ಇತರೆ ಯಾವುದೇ ಭ್ರಷ್ಟಾಚಾರದ ದೂರುಗಳಿದ್ದಲ್ಲಿ ಲೋಕಾಯುಕ್ತ ಕಛೇರಿ, ತುಮಕೂರು ದೂರವಾಣಿ ಸಂಖ್ಯೆ: 0816-2950332, 2278540, 2251460 ಗೆ ಸಂಪರ್ಕಿಸುವಂತೆ ಕರಪತ್ರ ವಿತರಿಸಲಾಯಿತು. ತಹಸೀಲ್ದಾರ್ ರೇಣುಕುಮಾರ್, ಇಒ ಶಿವರಾಜಯ್ಯ, ಬಿಇಒ ಸೋಮಶೇಖರ್, ಮುಖ್ಯಾಧಿಕಾರಿ ಶ್ರೀನಾಥ್ ಬಾಬು, ಸಿಡಿಪಿಒ ಗೋಪಾಲಪ್ಪ, ಎಡಿಎಲ್ಆರ್ ಶಿವಶಂಕರ್ ಸೇರಿದಂತೆ ಸರ್ಕಾರಿ ನೌಕರರು, ನಾಗರೀಕರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್