ಹಮಾಸ್: ಗಾಝಾದ ಜಬಾಲಿಯಾ ನಿರಾಶ್ರಿತರ ಶಿಬಿರದ ಮೇಲೆ ಮಂಗಳವಾರ ಮತ್ತು ಬುಧವಾರ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 195 ಫೆಲೆಸ್ತೀನೀಯರು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ನಡೆಸುತ್ತಿರುವ ಸರ್ಕಾರಿ ಮಾಧ್ಯಮ ಕಚೇರಿ ತಿಳಿಸಿದೆ.
ಕಚೇರಿಯ ಹೇಳಿಕೆಯನ್ನು ಉಲ್ಲೇಖಿಸಿ ರಾಯಿಟರ್ಸ್ ಪ್ರಕಾರ, ಕನಿಷ್ಠ 777 ಜನರು ಗಾಯಗೊಂಡಿದ್ದಾರೆ ಮತ್ತು ಸುಮಾರು 120 ಜನರು ಇನ್ನೂ ಅವಶೇಷಗಳ ಅಡಿಯಲ್ಲಿ ಕಾಣೆಯಾಗಿದ್ದಾರೆ ಎಂದಿದೆ.ಶಿಬಿರದಲ್ಲಿದ್ದ ಹಮಾಸ್ ನಾಯಕರನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ಹೇಳಿದೆ.
ಗಾಝಾದ ಜಬಾಲಿಯಾ ಶಿಬಿರದ ಮೇಲೆ ಎರಡು ದಿನಗಳಲ್ಲಿ ಎರಡನೇ ಬಾರಿಗೆ ದಾಳಿ ನಡೆದಿದ್ದು, ಬುಧವಾರದ ದಾಳಿಯ ಎಎಫ್ಪಿಟಿವಿ ಚಿತ್ರಗಳು ವ್ಯಾಪಕ ಹಾನಿಯನ್ನು ತೋರಿಸುತ್ತವೆ ಮತ್ತು ರಕ್ತಸಿಕ್ತ ಸಾವುನೋವುಗಳನ್ನು ಹೊರತೆಗೆಯಲು ರಕ್ಷಣಾ ಸಿಬ್ಬಂದಿ ಅವಶೇಷಗಳ ಮೂಲಕ ಶೋಧ ನಡೆಸುತ್ತಿದ್ದಾರೆ ಕಾಣಬಹುದಾಗಿದೆ.
“ಇಡೀ ಕುಟುಂಬಗಳು” ಸಾವನ್ನಪ್ಪಿವೆ ಎಂದು ರಕ್ಷಣಾ ಕಾರ್ಯಕರ್ತರು ತಿಳಿಸಿದ್ದಾರೆ. ಈ ಬಗ್ಗೆ ಇಸ್ರೇಲ್ ಸೇನೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಜನನಿಬಿಡ ಜಬಾಲಿಯಾ ನಿರಾಶ್ರಿತರ ಶಿಬಿರದ ವಸತಿ ಪ್ರದೇಶಗಳಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಿಂದ ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ದಿಗ್ಭ್ರಮೆಗೊಂಡಿದ್ದಾರೆ ಎಂದು ವಕ್ತಾರರು ಹೇಳಿದ್ದಾರೆ.