ಬೆಳಗಾವಿ: ಕೆಲ ದಿನಗಳಿಂದ ಸ್ಥಗಿತ ಗೊಂಡಿದ್ದ ಬೆಳಗಾವಿ ಹಾಗೂ ದೆಹಲಿ ನಡುವಿನ ವಿಮಾನ ಹಾರಾಟ ಇದೀಗ ಮತ್ತೆ ಆರಂಭವಾಗಿದೆ. ವಿಮಾನ ಸಿಬ್ಬಂದಿ ಪ್ರಯಾಣಿಕರಿಗೆ ಕನ್ನಡದಲ್ಲಿಯೇ ಸ್ವಾಗತಿಸುವ ಮೂಲಕ ಗಮನ ಸೆಳೆದಿದ್ದಾರೆ.
ಬೆಳಗಾವಿ ಹಾಗೂ ದೆಹಲಿ ನಡುವೆ ಈ ಹಿಂದೆ ವಿಮಾನ ಸೇವೆ ಇತ್ತು, ಆದರೆ ಕಾರಣಾಂತರಗಳಿಂದ ಸ್ಥಗಿತಗೊಳಿಸಲಾಗಿತ್ತು.
ಈ ಬಗ್ಗೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಕೇಂದ್ರ ವಿಮಾನ ಯಾನ ಸಚಿವರಿಗೆ ಮನವಿ ಮಾಡಿ, ಬೆಳಗಾವಿ-ದೆಹಲಿ ನಡುವೆ ಮತ್ತೆ ವಿಮಾನ ಯಾನ ಕಲ್ಪಿಸಲು ಹೇಳಿದ್ದರು.
ಇದೀಗ ಗಡಿ ಜಿಲ್ಲೆ ಬೆಳಗಾವಿ ಹಾಗೂ ರಾಷ್ಟ್ರ ರಾಜಧಾನಿ ದೆಹಲಿಗೆ ಮತ್ತೆ ವಿಮಾನ ಹಾರಾಟ ಆರಂಭವಾಗಿದೆ. ಬೆಳಗಾವಿಯಿಂದ ದೆಹಲಿಗೆ ತೆರಳಿದ ಮೊದಲ ಇಂಡಿಗೋ ಫ್ಲೈಟ್ ನಲ್ಲಿ ವಿಮಾನ ಸಿಬ್ಬಂದಿ ಪ್ರಯಾಣಿಕರನ್ನು ಕನ್ನಡದಲ್ಲಿಯೇ ಸ್ವಾಗತಿಸಿದರು. ಉಭಯ ನಗರಗಳ ನಡುವೆ ನೇರ ವಿಮಾನ ಸೇವೆಗೆ ಕರಣರಾದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರಿಗೆ ಅಭಿನಂದನೆ ಸಲ್ಲಿಸಿದರು.
ಎಲ್ಲರೂ ಆರಾಮವಾಗಿ ಕುಳಿತುಕೊಳ್ಳಿ ಕೇವಲ 2ಗಂಟೆ 10 ನಿಮಿಷದಲ್ಲಿ ದೆಹಲಿಯನ್ನು ತಲುಪಲಿದ್ದೇವೆ ಎಂದು ವಿಮಾನ ಸಿಬ್ಬಂದಿ ಅಕ್ಷಯ್ ಕನ್ನಡದಲ್ಲಿಯೇ ವಿವರಿಸಿದ್ದು ವಿಶೇಷವಾಗಿತ್ತು. ಬೆಳಗಾವಿ-ದೆಹಲಿ ನಡುವೆ ಟಿಕೆಟ್ ಕಾಯ್ದಿರಿಸಲು ಪ್ರಕ್ರಿಯೆ ಕೂಡ ಆರಂಭವಾಗಿದೆ.