Join The Telegram | Join The WhatsApp |
ಮುಂಬೈ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಜಾತೀಯತೆ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಈ ದೇಶದಲ್ಲಿ ಅಭಿಪ್ರಾಯಗಳು ಬೇರೆ ಇರಬಹುದು . ಆದರೆ ಸಾಕ್ಷ್ಯಪ್ರಜ್ಞೆ ಒಂದೇ ಎಂದವರು ಹೇಳಿದ್ದಾರೆ.
ಸಂತ ಶಿರೋಮಣಿ ರೋಹಿದಾಸ್ ಅವರ 647 ನೇ ಜನ್ಮೋತ್ಸವದ ಅಂಗವಾಗಿ ಮುಂಬೈನ ರವೀಂದ್ರ ನಾಟ್ಯ ಮಂದಿರದಲ್ಲಿ ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಭಾಗವತ್ , ಜಾತಿ ವ್ಯವಸ್ಥೆ ಭಾರತೀಯ ಸಮಾಜಕ್ಕೆ ಮಾರಕವಾಗಿದೆ ಎಂದಿದ್ದಾರೆ .
ನಮ್ಮ ಸೃಷ್ಟಿಕರ್ತನಿಗೆ ನಾವೆಲ್ಲರೂ ಸಮಾನರು. ಯಾವುದೇ ಜಾತಿ, ಪಂಥ, ಮತಗಳನ್ನು ಆತ ಸೃಷ್ಟಿಸಲಿಲ್ಲ. ಈ ವೈರುದ್ಧ್ಯಗಳನ್ನು ಸೃಷ್ಟಿಸಿದ್ದು ಪುರೋಹಿತರು. ಇದು ತಪ್ಪು ಎಂದು ಆರೆಸ್ಸೆಸ್ ಸರಸಂಘಚಾಲಕರು ಹೇಳಿದ್ದಾರೆ.
ನಾವು ಈ ಸಮಾಜದಲ್ಲಿ ಬದುಕುತ್ತಿರುವಾಗ ಜವಾಬ್ದಾರಿಗಳೂ ಹೆಗಲ ಮೇಲಿರುತ್ತವೆ. ಸಮಾಜದ ಒಳಿತಿಗಾಗಿ ಯಾವುದೇ ಕೆಲಸ ಮಾಡಿದರೂ ಅದು ದೊಡ್ಡದಾ, ಚಿಕ್ಕದಾ ಅಥವಾ ವಿಭಿನ್ನವಾ ಎಂದು ಹೇಳಲಾಗದು. ಎಲ್ಲಾ ಒಳ್ಳೆಯ ಕೆಲಸಗಳು ಒಳ್ಳೆಯವೇ ಎಂದು ಮೋಹನ್ ಭಾಗವತ್ ವಿಶ್ಲೇಷಿಸಿದ್ದಾರೆ.
ಇನ್ನು ಜಾತಿಶ್ರೇಷ್ಠತೆಯ ವಿಚಾರದ ವಿರುದ್ಧ ಸಿಡಿಗುಟ್ಟಿದ ಅವರು, ಸಂತ ಶಿರೋಮಣಿಯ ಉದಾಹರಣೆ ನೀಡಿದ್ದಾರೆ. ತುಳಸೀದಾಸ್, ಕಬೀರ್ ಮತ್ತು ಸೂರದಾಸ್ ಅವರಿಗಿಂತ ಸಂತ ಶಿರೋಮಣಿ ರೋಹಿದಾಸ್ ಮೇಲಿದ್ದಾರೆ. ಶಾಸ್ತ್ರದಲ್ಲಿ ಅವರು ಬ್ರಾಹ್ಮಣರನ್ನು ಗೆಲ್ಲಲು ಆಗದೇ ಹೋದರೂ ಹಲವರ ಹೃದಯಗಳನ್ನು ಗೆದ್ದು ದೇವರಲ್ಲಿ ನಂಬಿಕೆ ಉಂಟಾಗುವಂತೆ ಮಾಡಿದವರು.
ಧರ್ಮ ಎಂಬುದು ಒಬ್ಬರ ಹೊಟ್ಟೆ ಹೊರೆಯುವುದಕ್ಕೆ ಮಾತ್ರ ಸೀಮಿತವಲ್ಲ ಎಂಬುದನ್ನು ಹೇಳಿಕೊಟ್ಟವರು ಸಂತ ಶಿರೋಣಿ ರೋಹಿದಾಸ್ ಎಂದು ಆರೆಸ್ಸೆಸ್ ಮುಖ್ಯಸ್ಥರು ತಿಳಿಸಿದ್ದಾರೆ.
ನಿಮ್ಮ ಧರ್ಮದ ಪ್ರಕಾರ ನಿಮ್ಮ ಕರ್ತವ್ಯ ನಿಭಾಯಿಸಿ. ಸಮಾಜದಲ್ಲಿ ಒಗ್ಗಟ್ಟು ತಂದು ಅದರ ಏಳ್ಗೆಗೆ ಕೆಲಸ ಮಾಡಿ. ಅದೇ ಧರ್ಮ. ಇಂಥ ಆದರ್ಶಗಳಿಂದಾಗಿ ಹಲವರು ದೊಡ್ಡ ಜನರು ಸಂತ ರೋಹಿದಾಸರ ಅನುಯಾಯಿಗಳಾಗಿದ್ದಾರೆ ಎಂದವರು ಹೇಳಿದ್ದಾರೆ.
Join The Telegram | Join The WhatsApp |