ಧಾರವಾಡ : ಮಳೆ ಕೊರತೆಯಿಂದಾಗಿ ಮುಂಗಾರು ವಿಫಲವಾಗಿದ್ದು, ಬರಗಾಲ ಘೋಷಣೆಗೆ ಸರಕಾರ ಉಪಸಮಿತಿ ರಚಿಸಿದೆ. ಈಗಾಗಲೇ 196 ತಾಲೂಕುಗಳಲ್ಲಿ ಬರ ಅಧ್ಯಯನ ಕೈಗೊಳ್ಳಲಾಗಿದೆ.
ವರದಿ ಪರಿಶೀಲಿಸಿ, ಮುಂದಿನ ಮೂರು-ನಾಲ್ಕು ದಿನಗಳಲ್ಲಿ ಎಷ್ಟು ತಾಲೂಕುಗಳು ಬರಪೀಡಿತ ಎಂದು ಸರಕಾರ ಘೋಷಿಸಲಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಧಾರವಾಡ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಆಯೋಜಿಸಲಾಗಿದ್ದ ಕೃಷಿಮೇಳದಲ್ಲಿ ಮಾತನಾಡಿದ ಅವರು, ಅನೇಕ ವೀರರ ತ್ಯಾಗ ಬಲಿದಾನಗಳಿಂದ ಸ್ವಾತಂತ್ರ್ಯ ಸಿಕ್ಕಿದೆ.
ರೈತರು ಅನೇಕ ಸಮಸ್ಯೆಗಳಿಂದ ತೊಂದರೆ ಅನುಭವಿಸುತ್ತಿದ್ದು, ಅವುಗಳ ಪರಿಹಾರಕ್ಕಾಗಿ ರಾಜ್ಯ ಸರಕಾರ ಅನೇಕ ಯೋಜನೆ ಜಾರಿಗೊಳಿಸಿದೆ. ದೇಶಕ್ಕೆ ಮಾದರಿಯಾಗುವ ಕಾರ್ಯಕ್ರಮಗಳನ್ನು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾರಿಗೊಳಿಸಿದ್ದಾರೆ ಎಂದು ಅವರು ಹೇಳಿದರು.
ಸರಕಾರದ ಆರ್ಥಿಕ ಸುರಕ್ಷತೆ ಕಾಪಾಡಿಕೊಂಡು ಬಡವರ, ಹಿಂದುಳಿದವರ, ರೈತರ, ಮಹಿಳೆಯರ ಅಭಿವೃದ್ಧಿಗಾಗಿ ವಿಶೇಷವಾದ ಪಂಚ ಗ್ಯಾರಂಟಿ ಯೋಜನೆಗಳನ್ನು ಸರಕಾರ ಅನುಷ್ಠಾನಗೊಳಿಸಿದೆ.
ಕೃಷಿಭಾಗ್ಯ ಯೋಜನೆ ಮುಂದುವರಿಕೆ ಸರಕಾರ ಆದೇಶಿಸಿದೆ. ಧಾರವಾಡ ಕೃಷಿ ವಿವಿಯು, ರಾಷ್ಟ್ರದ 10 ಉತ್ತಮ ಕೃಷಿ ವಿಶ್ವವಿದ್ಯಾಲಯದಗಳಲ್ಲಿ ಸ್ಥಾನಪಡೆದಿದೆ. ಸಂಶೋಧನೆ, ಕೃಷಿ ತಾಂತ್ರಿಕತೆ, ಉತ್ತಮ ಬೀಜ ತಳಿಗಳ ಬಿಡುಗಡೆ ಮಾಡುವ ಮೂಲಕ ರೈತರ ಕಣ್ಮನಿಯಾಗಿದೆ ಎಂದರು. ರಾಜ್ಯ ಸರಕಾರ ರೈತರ ಬೆಳೆವಿಮೆಗಾಗಿ ರೂ.900 ಕೋಟಿ ಮೀಸಲಿಡಲಾಗಿದೆ. ಇದರಿಂದ ಬೆಳೆವಿಮೆ ಮಾಡಿಸಿರುವ ಸುಮಾರು 16 ಲಕ್ಷ ರೈತರು ಲಾಭ ಪಡೆಯಲಿದ್ದಾರೆ ಎಂದು ಕೃಷಿ ಸಚಿವರು ತಿಳಿಸಿದರು.
ಈ ವರ್ಷ ಸಿರಿಧಾನ್ಯ ಅಂತರಾಷ್ಟ್ರೀಯ ವರ್ಷವಾಗಿರುವುದರಿಂದ ರಾಜ್ಯ ಸರಕಾರದಿಂದ ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್ ಗೆ ರೂ.10 ಸಾವಿರ ಸಹಾಯಧನವನ್ನು ನೀಡಲಾಗುತ್ತಿದೆ ಎಂದರು.
ಕಬ್ಬು ಹಾಗೂ ಇತರ ಬೆಳೆಗಳ ಕಟಾವು ತಾಂತ್ರಿಕತೆ ಸುಧಾರಣೆಗಾಗಿ ಐಟಿ ಹಬ್ ಸ್ಥಾಪನೆಗೆ ರಾಜ್ಯ ಸರಕಾರ ರೂ.50 ಕೋಟಿ ಮೀಸಲಿಡಲಾಗಿದೆ. ರೈತರಿಗೆ ಬೀಜ, ಗೊಬ್ಬರ, ಕೀಟನಾಶಕಗಳು ಕೊರತೆ ಅಗದಂತೆ ಮುನ್ನಚ್ಚರಿಕೆ ವಹಿಸಿ, ಅಗತ್ಯ ದಾಸ್ತಾನು ಮಾಡಲಾಗಿದೆ ಎಂದು ಸಚಿವರು ಹೇಳಿದರು.
ಮಳೆ ಕೊರತೆಯಿಂದಾಗಿ ಮುಂಗಾರು ವಿಫಲವಾಗಿದ್ದು, ಬರಗಾಲ ಘೋಷಣೆಗೆ ಸರಕಾರ ಉಪಸಮಿತಿ ರಚಿಸಿದೆ. ಈಗಾಗಲೇ 196 ತಾಲೂಕುಗಳಲ್ಲಿ ಬರ ಅಧ್ಯಯನ ಕೈಗೊಳ್ಳಲಾಗಿದೆ. ವರದಿ ಪರಿಶೀಲಿಸಿ, ಮುಂದಿನ ಮೂರು-ನಾಲ್ಕು ದಿನಗಳಲ್ಲಿ ಎಷ್ಟು ತಾಲೂಕುಗಳು ಬರಪೀಡಿತ ಎಂದು ಸರಕಾರ ಘೋಷಿಸಲಿದೆ ಎಂದು ಕೃಷಿ ಸಚಿವರು ತಿಳಿಸಿದರು.