ಜಮ್ಮುಕಾಶ್ಮೀರ : ಕಾಶ್ಮೀರದಿಂದ ಪಂಜಾಬ್ ಗೆ ತೆರಳುತ್ತಿದ್ದ ಖಾಸಗಿ ವಾಹನ ಒಂದರಲ್ಲಿ ಸುಮಾರು 300 ಕೋಟಿಗೂ ಅಧಿಕ ಮೌಲ್ಯದ 30 ಕೆಜಿ ಕೊಕೆನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಮ್ಮು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ ಇದೇ ವೇಳೆ ವಾಹನದಲ್ಲಿದ್ದ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಹೆಚ್ಚಿನ ವಿವರ ನೀಡಿದ ಜಮ್ಮು ವಲಯದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಮುಖೇಶ್ ಸಿಂಗ್, ಶನಿವಾರ ರಾತ್ರಿ 10.30 ರ ಸುಮಾರಿಗೆ ಎಸ್ಎಸ್ಪಿ ಶರ್ಮಾ ನೇತೃತ್ವದ ರಾಂಬನ್ ಪೊಲೀಸರು ಕಾಶ್ಮೀರದಿಂದ ಜಮ್ಮು ಕಡೆಗೆ ಬರುತ್ತಿದ್ದ ವಾಹನವನ್ನು ರೈಲ್ವೆ ಚೌಕ್ ಬನಿಹಾಲ್ನಲ್ಲಿ ತಡೆದು ಸುಮಾರು 30 ಕೆಜಿ ಕೊಕೇನ್ ವಶಪಡಿಸಿಕೊಂಡರು.
ಈ ಸಂಬಂಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸ್ (ಎನ್ಡಿಪಿಎಸ್) ಕಾಯ್ದೆಗೆ ಸಂಬಂಧಿಸಿದ ವಿವಿಧ ಸೆಕ್ಷನ್ಗಳ ಅಡಿ ಬನಿಹಾಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ರಾಂಬನ್ ಎಸ್ಎಸ್ಪಿ ಮೊಹತಾ ಶರ್ಮಾ, ಜಮ್ಮು ಮತ್ತು ಶ್ರೀನಗರ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಡ್ರಗ್ಸ್ ಸಾಗಾಟದ ಬಗ್ಗೆ ನಿರ್ದಿಷ್ಟ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ರೈಲ್ವೆ ಚೌಕ್ ಬನ್ಹಾಲ್ ಬಳಿ ಪೊಲೀಸ್ ಅಧಿಕಾರಿಗಳು ಖಾಸಗಿ ವಾಹನವನ್ನು ತಡೆದು ತಪಾಸಣೆ ನಡೆಸಿದರು.
ಶೋಧ ಕಾರ್ಯ ನಡೆಸಿದ ವೇಳೆ ವಾಹನದಿಂದ 30 ಕೆಜಿ ಕೊಕೇನ್ ಪತ್ತೆಯಾಗಿದ್ದು, ಅದರ ಮೌಲ್ಯ ಸುಮಾರು 300 ಕೋಟಿ ರೂಪಾಯಿ ಆಗಿದೆ. ಕಾರ್ಯಾಚರಣೆ ವೇಳೆ ಇಬ್ಬರು ಆರೋಪಿಗಳನ್ನು ಸಹ ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದೊಂದು ನಾರ್ಕೋ – ಟೆರರ್ ಪ್ರಕರಣವಾಗಿದ್ದು, ಗಡಿಯಾಚೆಗಿನ ದೃಷ್ಟಿಕೋನಗಳ ಬಗ್ಗೆಯೂ ತನಿಖೆ ನಡೆಸುತ್ತಿದ್ದೇವೆ. ವಾಹನದಲ್ಲಿದ್ದ ಇಬ್ಬರನ್ನು ಎಸ್ಡಿಪಿಎಸ್ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳಿಂದ ಪ್ರಕರಣದ ತನಿಖೆ ನಡೆಸಲಾಗುತ್ತಿದೆ.
ಬಂಧಿತ ಕಳ್ಳಸಾಗಣೆದಾರರು ಪಂಜಾಬ್ ಮೂಲದವರಾಗಿದ್ದು, ಜಲಂಧರ್ನ ಸರಬ್ಜೀತ್ ಸಿಂಗ್ ಮತ್ತು ಪಂಜಾಬ್ನ ಫಗ್ವಾರದ ಹನಿ ಬಸ್ರಾ ಎಂದು ಗುರುತಿಸಲಾಗಿದೆ ಅಂತಾ ಬನಿಹಾಲ್ ಠಾಣಾಧಿಕಾರಿ ಮೊಹಮ್ಮದ್ ಅಪ್ಪಲ್ ವಾನಿ ಮಾಹಿತಿ ನೀಡಿದರು.