Join The Telegram | Join The WhatsApp |
ಬೆಳಗಾವಿಯಿಂದ ಕೇವಲ 113 ಕಿಲೋಮೀಟರ್ ದೂರದ ಕೊಲ್ಲಾಪುರ ಹಲವು ಪ್ರವಾಸಿ ತಾಣಗಳನ್ನು ಒಳಗೊಂಡಿದೆ. ಅವುಗಳಲ್ಲಿ ನ್ಯೂ ಶಾಹು ಪ್ಯಾಲೇಸ್ ಪ್ರಮುಖವಾದದ್ದು.
ಕಪ್ಪು ಕಲ್ಲಿನಿಂದ ನಿರ್ಮಿಸಲಾದ ಈ ಕಟ್ಟಡವು ಗಾರ್ಡನ್, ಕಾರಂಜಿ ಮತ್ತು ಕುಸ್ತಿ ಮೈದಾನವನ್ನು ಹೊಂದಿದೆ. ಇದು ಎಂಟು ಆಂಗಲ್ ಗಳನ್ನು ಮತ್ತು ಮಧ್ಯದಲ್ಲಿ ಒಂದು ಗೋಪುರವನ್ನು ಹೊಂದಿದೆ.
ದೊಡ್ಡದಾದ ಗಡಿಯಾರವನ್ನು 1877 ರಲ್ಲಿ ಕಟ್ಟಡಕ್ಕೆ ಅಳವಡಿಸಲಾಗಿದೆ. ಕಟ್ಟಡವು ಎತ್ತರವಿದ್ದು ಹಲವು ಚಿಕ್ಕ ಚಿಕ್ಕ ಗುಮ್ಮಟಗಳನ್ನು ಹೊಂದಿದೆ. ನಿಯೋ ಮೊಘಲ್ ಶೈಲಿಯ ವಾಸ್ತುಶಿಲ್ಪವನ್ನು ಇಲ್ಲಿ ಕಾಣಬಹುದು.
ಮರಾಠ ಸಾಮ್ರಾಜ್ಯದ ಸ್ಥಾಪಕನಾದ ಶಿವಾಜಿಯ ವಂಶಸ್ಥರಾದ ಛತ್ರಪತಿ ಶಾಹು ಮಹಾರಾಜರ ಕುಟುಂಬದವರು ಈ ಪ್ಯಾಲೇಸಿನ ಮೊದಲ ಮಹಡಿಯಲ್ಲಿ ಈಗಲೂ ವಾಸಿಸುತ್ತಾರೆ.
ಪ್ಯಾಲೇಸಿನ ತಳ ಮಹಡಿಯನ್ನು ಮ್ಯೂಸಿಯಂ ಆಗಿ ಬಳಸಲಾಗುತ್ತದೆ. ಷಹಾಜಿ ಛತ್ರಪತಿ ಮ್ಯೂಸಿಯಂ ಎಂದು ಇದನ್ನು ಕರೆಯಲಾಗುತ್ತದೆ. ಇದು ರಾಜ-ಮಹಾರಾಜರ ಅತ್ಯುನ್ನತ ಜೀವನ ಶೈಲಿಯನ್ನು ಪ್ರದರ್ಶಿಸುತ್ತದೆ.
ರಾಜ-ರಾಣಿಯರು ಬಳಸುತ್ತಿದ್ದ ಅಂದಿನ ಕಾಲದ ವಸ್ತುಗಳನ್ನು ಈ ಮ್ಯೂಸಿಯಂನಲ್ಲಿ ಕಾಣಬಹುದು. ಅವರ ಬಟ್ಟೆಗಳು, ಆಯುಧಗಳು, ಆಟಗಳು, ಆಭರಣಗಳು, ನಾಣ್ಯಗಳು, ಪುಸ್ತಕಗಳು, ಎಂಬ್ರಾಯ್ಡರಿ ಕೆಲಸಗಳು, ಮೇಜು, ಕುರ್ಚಿ, ತೊಟ್ಟಿಲು, ಆನೆಯ ಮೇಲೆ ಹಾಕುವ ಬೆಳ್ಳಿಯ ರಕ್ಷಾಕವಚಗಳನ್ನು ಕೂಡ ನೋಡಬಹುದು.
Join The Telegram | Join The WhatsApp |