ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬರಪೀಡಿತ ಪ್ರದೇಶಗಳಿಗೆ ಹಣ ಬಿಡುಗಡೆ ಮಾಡಿದ ಪಟ್ಟಿ ಬಿಡುಗಡೆಗೊಳಿಸಿದ್ದಾರೆ. ನಾನು ಅನೇಕ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ಒಂದು ಜಿಲ್ಲೆಗೂ ಒಂದು ರೂಪಾಯಿ ಹೋಗಿಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರು ಇಂದು ಟೀಕಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, 300 ಕೋಟಿಗೂ ಹೆಚ್ಚು ಹಣ ನೀಡಿದ್ದಾಗಿ ಹೇಳಿದ್ದಾರೆ.
ಒಬ್ಬ ರೈತರಿಗೂ ಒಂದು ರೂಪಾಯಿ ನೀಡಿಲ್ಲ. ನಾವು ಜಿಲ್ಲೆಗಳ ರೈತರನ್ನು ಮಾತನಾಡಿಸಿದ್ದೇವೆ. ಬೆಳೆ ಮಾಹಿತಿ, ಭೇಟಿ ನೀಡಿದ ಮುಖಂಡರ ಬಗ್ಗೆ ಕೇಳಿದ್ದೇವೆ. ಒಬ್ಬರೂ ಬಂದಿಲ್ಲ ಎಂದಿದ್ದಾರೆ. ಭೀಕರ ಬರಗಾಲದಿಂದ ಜನರು ಗುಳೆ ಹೋಗುತ್ತಿದ್ದಾರೆ ಎಂದರು.
ಬರದ ಕುರಿತು ಸಿಎಂ ಸುಳ್ಳು ಹೇಳುತ್ತಿದ್ದಾರೆ. ಜಿಲ್ಲಾಧಿಕಾರಿಗಳು ‘ಬರುತ್ತೆ ಸರ್, ಬರುತ್ತೆ ಸರ್’ ಎನ್ನುತ್ತಾರೆ. ಶಾಸಕರ ನಿಧಿ 50 ಲಕ್ಷ ಬಿಡುಗಡೆ ಮಾಡಿದ್ದಾಗಿ ತಿಳಿಸಿ ತಿಂಗಳಾಗಿದೆ. ಆದರೆ, ಶಾಸಕರಿಗೂ ದುಡ್ಡು ಹೋಗಿಲ್ಲ. ಬರ ಪರಿಹಾರ ಹಣದ ಲೆಟರ್ ಹೋದರೆ ದುಡ್ಡು ಹೋದಂತಾಗುತ್ತದೆಯೇ ಎಂದು ಪ್ರಶ್ನಿಸಿದರು.
ರೈತರಿಗೆ ದ್ರೋಹ ಮಾಡುವ ಮೊದಲನೇ ಮುಖ್ಯಮಂತ್ರಿ ಇವರು ಎಂದು ಟೀಕಿಸಿದ ಅವರು, ತಕ್ಷಣ ಹಣ ಬಿಡುಗಡೆ ಮಾಡಿ; ಅದು ರೈತರಿಗೆ ತಲುಪುವಂತೆ ನೋಡಿಕೊಳ್ಳಿ ಎಂದು ಆಗ್ರಹಿಸಿದರು. ಶಾಸಕರಿಗೂ ಹಣ ಬಿಡುಗಡೆ ಮಾಡಿ ಎಂದು ಒತ್ತಾಯಿಸಿದರು.