Join The Telegram | Join The WhatsApp |
ಕುಮಾರಪಟ್ಟಣ: ‘ಲಿಂಪಿಸ್ಕಿನ್ ಸೋಂಕಿನಿಂದ ಬಂದ್ ಆಗಿರುವ ಜಾನುವಾರು ಮಾರುಕಟ್ಟೆಗಳನ್ನು ಕೂಡಲೇ ಪ್ರಾರಂಭಿಸದಿದ್ದರೆ ಜಿಲ್ಲೆಯಾದ್ಯಂತ ಬೀದಿಗಿಳಿದು ರಸ್ತೆ ತಡೆ ಚಳುವಳಿ ನಡೆಸಲಾಗುವುದು’ ಎಂದು ರೈತ ಮುಖಂಡ ರವೀಂದ್ರಗೌಡ ಪಾಟೀಲ ಎಚ್ಚರಿಕೆ ನೀಡಿದರು. ಸಮೀಪದ ಮಾಕನೂರು ಕ್ರಾಸ್ ನಲ್ಲಿ ಬುಧವಾರ ಜಾನುವಾರು ಮಾರುಕಟ್ಟೆ ಪುನರಾರಂಭಿಸುವಂತೆ ಒತ್ತಾಯಿಸಿ ರೈತರು ರಸ್ತೆ ತಡೆ ನಡೆಸಿ ಮನವಿ ಸಲ್ಲಿಸಿದ ಬಳಿಕ ಅವರು ಮಾತನಾಡಿ, ಜಾನುವಾರುಗಳಿಗೆ ಹರಡಿದ್ದ ಚರ್ಮಗಂಟು ರೋಗ ನಿಯಂತ್ರಣಕ್ಕೆ ಬಂದಿದ್ದರೂ ಜಾನುವಾರು ಮಾರುಕಟ್ಟೆಗಳನ್ನು ಮಾತ್ರ ಆರಂಭಿಸದೆ ಜಿಲ್ಲಾಡಳಿತ ರೈತರನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿದರು. ರೈತರು ಕುರಿ, ಮೇಕೆ, ದಿನಕರುಗಳನ್ನು ಖರೀದಿಸಲು ಅಥವಾ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಮಾರುಕಟ್ಟೆ ಸೌಲಭ್ಯವಿಲ್ಲದೆ ಹಾದಿ ಬೀದಿಯಲ್ಲಿ ಮನೆ ಬಂದಂತೆ ವ್ಯವಹಾರ ನಡೆಯುತ್ತಿದೆ. ರೈತರಿಗೆ ಲಾಭವಾಗುತ್ತಿಲ್ಲ. ಮಧ್ಯವರ್ತಿಗಳ ಹಾವಳಿಯಿಂದ ಬೇಸತ್ತು ಹೋಗಿದ್ದಾರೆ. ಲಾಭದ ಆಸೆಗೆ ರೈತರನ್ನು ಸಂಕಷ್ಟಕ್ಕೆ ದೂಡುತ್ತಿದ್ದಾರೆ ಎಂದು ದೂರಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಈರಣ್ಣ ಹಲಗೇರಿ ಮಾತನಾಡಿ, ಎರಡು ಮೂರು ದಿನಗಳಲ್ಲಿ ಜಾನುವಾರು ಮಾರುಕಟ್ಟೆಗಳನ್ನು ಪ್ರಾರಂಭಿಸದಿದ್ದರೆ ಜಿಲ್ಲಾಡಳಿತದ ವಿರುದ್ಧ ಬೀದಿಗಿಳಿದು ಹೋರಾಟ ಮಾಡು ಪ್ರತಿಯೊಂದಕ್ಕೂ ಬೀದಿಗಿಳಿದು ಹೋರಾಟ ಮಾಡಲಾಗುವುದು. ಎಲ್ಲ ಸಮಸ್ಯೆಗಳನ್ನು ಹೋರಾಟ ಮಾಡಿಯೇ ಬಗೆಹರಿಸಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ರೈತ ಮುಖಂಡರಾದ ಚಂದ್ರಣ್ಣ ಬೇಡರ, ಹರಿಹರಗೌಡ ಪಾಟೀಲ ಅಧಿಕಾರಿಗಳ ನಿರ್ಲಕ್ಷ್ಯತನ ಮತ್ತು ವರ್ತನೆಯನ್ನು ಖಂಡಿಸಿದರು. ಗ್ರಾಮ ಲೆಕ್ಕಾಧಿಕಾರಿ ಬಸವಾರಜ ಗುಳೇದ ಮನವಿ ಸ್ವೀಕರಿಸಿದರು. ಕುಮಾರಪಟ್ಟಣ ಠಾಣೆಯ ಪಿಎಸ್ಐ ರಂಗಪ್ಪ ಅಂಬಿಗೇರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಿದ್ದರು. ಈ ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಸುರೇಶ್ ಮಲ್ಲಾಪುರ, ಚಂದ್ರಣ್ಣ ಬೇಡರ, ಹರಿಹರಗೌಡ ಎಸ್. ಪಾಟೀಲ, ಭೀಮೇಶ್ ಪೂಜಾರ, ಎನ್.ಎಚ್. ಮೇಘರಾಜ್, ಯಲ್ಲಪ್ಪ ಓಲೇಕಾರ, ಮಲಕಪ್ಪ ಲಿಂಗದಹಳ್ಳಿ, ಜಮಾಲಸಾಬ ಶೇತಸನದಿ, ಹವಳಪ್ಪೆ ಬೆಳಕೇರಿ, ಮೈಲಾರಪ್ಪ ಎಚ್., ಕಿವುಡೇರ, ಶಾಂತಪ್ಪ, ನಾಗನಗೌಡ ಪಾಟೀಲ ಭಾಗವಹಿಸಿದ್ದರು.
Join The Telegram | Join The WhatsApp |