Join The Telegram | Join The WhatsApp |
ಬೀದರ್: ‘ಬಿಜೆಪಿ ಸರ್ಕಾರ ಮೀಸಲಾತಿ ವಿಷಯದಲ್ಲಿ ಹುಡುಗಾಟ ಆಡುತ್ತಿದೆ. ಜನತೆಗೆ ಸುಳ್ಳು ಹೇಳುತ್ತಿದೆ. ಸರ್ಕಾರ ಯಾಮಾರಿಸುತ್ತಿರುವುದು ಗೊತ್ತಾದರೆ ಜನ ಬೀದಿ ಬೀದಿಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಪಂಚ ರತ್ನ ರಥಯಾತ್ರೆಯ ಪ್ರಯುಕ್ತ ಬೀದರ್ ತಾಲ್ಲೂಕಿನ ಜನವಾಡದಲ್ಲಿ ಗ್ರಾಮ ವಾಸ್ತವ್ಯ ಮಾಡಿದ ನಂತರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ‘ತೊಗರಿ ಬೆಳೆ ನಷ್ಟವಾದರೂ ಸರ್ಕಾರ ರೈತರ ನೆರವಿಗೆ ಬರಲಿಲ್ಲ. ರೈತರ ಯಾವುದೇ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಹೀಗಾಗಿ ರೈತ ಸಮುದಾಯದಲ್ಲಿ ಬಿಜೆಪಿ ವಿರೋಧಿ ಅಲೆ ಆರಂಭವಾಗಿದೆ’ ಎಂದು ತಿಳಿಸಿದರು. ‘ಆಪರೇಷನ್ ಹಸ್ತ–ಕಮಲದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಅಮಿತ್ ಶಾ ಗೂ ಕರ್ನಾಟಕಕ್ಕೂ ಏನು ಸಂಬಂಧ? ನನಗೆ ಅಮಿತ್ ಶಾ ಅಷ್ಟೇ ಅಲ್ಲ; ಯಾವುದೇ ಪಕ್ಷದ, ಯಾವುದೇ ವ್ಯಕ್ತಿಯ ಆತಂಕವೂ ಇಲ್ಲ. ನಮಗೆ ರೈತರ ಬಗ್ಗೆ ಕಾಳಜಿ ಕಳಕಳಿ ಇದೆ. ಜನರೊಟ್ಟಿಗೆ ನಾವಿದ್ದೇವೆ. ಜನರಿಗಾಗಿ ನಾವು ಹೋರಾಡುತ್ತಿದ್ದೇವೆ’ ಎಂದರು. ‘ನಾಯಿ, ನರಿಗಳ ಹೆಸರಿನಲ್ಲಿ ಎರಡು ಪಕ್ಷದವರು ರಾಜಕೀಯ ಮಾಡುತ್ತಿದ್ದಾರೆ. ಮಾನವೀಯ ಮೌಲ್ಯಗಳು ಮರೆಯಾಗುತ್ತಿವೆ. ಬಡವರ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಯಾರೂ ತಲೆ ಕಡೆಸಿಕೊಳ್ಳುತ್ತಿಲ್ಲ’ ಎಂದು ರಾಷ್ಟ್ರೀಯ ಪಕ್ಷಗಳ ವಿರುದ್ದ ಹರಿಹಾಯ್ದರು. ‘ಮುಖ್ಯಮಂತ್ರಿಗೆ ಸ್ಕ್ಯಾಂಟ್ರೊ ರವಿ ಗೊತ್ತಿಲ್ಲ ಅಂದ್ರೆ ಅದೇಕೆ ಮುಖ್ಯಮಂತ್ರಿಗೆ ಮೆಸೇಜ್ ಮಾಡ್ತಿದ್ದ. ಅಂತವರನ್ನು ಯಾಕೆ ಜತೆಗೆ ಇಟ್ಟುಕೊಂಡಿದ್ದಾರೆ. ರಾಜ್ಯದಲ್ಲಿ ಕೆಟ್ಟ ಸಂಸ್ಕೃತಿ ಬೆಳೆಸಿಕೊಂಡು ಬಂದಿದ್ದಾರೆ. ಕುಮಾರಕೃಪದ ಸುತ್ತಮುತ್ತ ಏನು ನಡೆಯುತ್ತಿದೆ. ಆ ದಂದೆ ಹೇಗೆ ನಡೆಯುತ್ತಿದೆ. ದೇವರಾಜ್, ಸ್ಕ್ಯಾಂಟ್ರೊ ರವಿ ಏನು ಮಾಡುತ್ತಿದ್ದಾರೆ ಎನ್ನುವುದು ಇದುವರೆಗೂ ಗೊತ್ತಾಗಿಲ್ಲವೆ’ ಎಂದು ವ್ಯಂಗ್ಯ ಮಾಡಿದರು. ಅಮಲಾಪೂರ: ಪಂಚರತ್ನ ರಥಯಾತ್ರೆ ಬೀದರ್ ತಾಲ್ಲೂಕಿನ ಅಮಲಾಪುರದಲ್ಲಿ ಪಂಚರತ್ನ ರಥಯಾತ್ರೆ ನಡೆಯಿತು. ಎತ್ತಿನ ಬಂಡಿಯಲ್ಲಿ ಬಂದ ಕಾರ್ಯಕರ್ತರು ಹಾಗೂ ರೈತರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕಿತ್ತಳೆ ಹಾರ ಹಾಕುವ ಮೂಲಕ ಅದ್ದೂರಿ ಸ್ವಾಗತ ನೀಡಿದರು. ಯುವಕರು ಬೈಕ್ ರ್‍ಯಾಲಿ ಮೂಲಕ ಬರ ಮಾಡಿಕೊಂಡರು. ನಂತರ ಮಾತನಾಡಿದ ಕುಮಾರಸ್ವಾಮಿ ಅವರು, ‘‘ಬಡವರ, ರೈತರ, ಗ್ರಾಮೀಣ ಜನರ ಒಳಿತಿಗೆ ಶಾಶ್ವತ ಕಾರ್ಯಕ್ರಮಗಳನ್ನು ತರುವ ಉದ್ದೇಶದಿಂದ ಕಾರ್ಯಕ್ರಮ ಹಾಕಿಕೊಂಡಿದ್ದೇವೆ’ ಎಂದರು.‘‘ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳ ಸಾಲವನ್ನು ನಾವು ಅಧಿಕಾರಕ್ಕೆ ಬಂದ 24 ಗಂಟೆಗಳೊಳಗೆ ಮನ್ನಾ ಮಾಡುತ್ತೇವೆ.ಬೀದಿ ಬದಿಯ ವ್ಯಾಪಾರಿಗಳಿಗೆ ಸರ್ಕಾರದಿಂದ ಬಡ್ಡಿ ರಹಿತ ಸಾಲ ಕೊಡುತ್ತೇವೆ’ ಎಂದು ತಿಳಿಸಿದರು. ವಿಧಾನ ಪರಿಷತ್ ಸದಸ್ಯ ರಮೇಶ ಗೌಡ, ವಿಧಾನಸಭೆ ಚುನಾವಣೆಯ ಬೀದರ್ ಕ್ಷೇತ್ರದ ಘೋಷಿತ ಅಭ್ಯರ್ಥಿ ರಮೇಶ ಪಾಟೀಲ ಸೋಲಪುರ, ಮುಖಂಡರಾದ ಒಬೆದುಲ್ಲಾ, ಸುರೇಶ ಮಹಾಗಾಂವ್, ಅಶೋಕಕುಮಾರ ಕರಂಜಿ, ದೇವೇಂದ್ರ ಸೋನಿ, ಬಸವರಾಜ ಪಾಟೀಲ ಹಾರೂರಗೇರಿ, ಐಲಿನ್‍ಜಾನ್ ಮಠಪತಿ, ಮಾರುತಿ ಬೌದ್ಧೆ, ರಾಜು ಕಡ್ಯಾಳ್ ಇದ್ದರು.
Join The Telegram | Join The WhatsApp |