ತುರುವೇಕೆರೆ: –ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರ ಜನ್ಮದಿನವನ್ನು ಪಟ್ಟಣ ಪಂಚಾಯ್ತಿಯಲ್ಲಿ ಸರಳವಾಗಿ ಆಚರಿಸಲಾಯಿತು. ಪಟ್ಟಣ ಪಂಚಾಯ್ತಿ ಆಡಳಿತಾಧಿಕಾರಿ, ತಹಸೀಲ್ದಾರ್ ರೇಣುಕುಮಾರ್, ಗಾಂಧಿಜಿ ಹಾಗೂ ಶಾಸ್ತ್ರೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಜಯಂತಿಗೆ ಚಾಲನೆ ನೀಡಿದರು.
ನಂತರ ಮಾತನಾಡಿದ ತಹಸೀಲ್ದಾರ್ ರೇಣುಕುಮಾರ್, ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜನ್ಮದಿನಾಚರಣೆಯ ಅಂಗವಾಗಿ ಒಂದು ದಿನ ಮೊದಲೇ ಪಟ್ಟಣದ ಹೃದಯಭಾಗದಲ್ಲಿ ಕಸ ಗುಡಿಸುವ ಮೂಲಕ ಸ್ವಚ್ಛ ಭಾರತ, ಸ್ವಚ್ಛ ತುರುವೇಕೆರೆ ಎಂಬ ಪರಿಕಲ್ಪನೆಯಡಿ ಸ್ವಚ್ಛತಾ ಆಂದೋಲನ ನಡೆಸಿ ಶ್ರಮದಾನದ ಮೂಲಕ ಜನರಲ್ಲಿ ಜಾಗೃತಿ ಅರಿವು ಮೂಡಿಸಲಾಗಿದೆ ಎಂದರು.
ಕಂದಾಯ ಇಲಾಖೆ, ಪಪಂ ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಸ್ವಚ್ಛತಾ ಆಂದೋಲನದಲ್ಲಿ ಪಾಲ್ಗೊಂಡು ಅರ್ಥಪೂರ್ಣವಾಗಿ ಗಾಂಧೀಜಿ, ಶಾಸ್ತ್ರೀಜಿ ಅವರ ಜಯಂತಿಯನ್ನು ಆಚರಿಸಿದ್ದಾರೆ. ನಾಗರೀಕರು ಪಟ್ಟಣವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಸ್ವಸ್ಥ, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕಾರಣಕರ್ತರಾಗಬೇಕೆಂದ ಅವರು, ಗಾಂಧೀಜಿಯವರ ಅಹಿಂಸಾ ತತ್ವ, ಶಾಸ್ತ್ರೀಜಿಯವರ ಕರ್ತವ್ಯನಿಷ್ಠೆ, ದೇಶಪ್ರೇಮವನ್ನು ಇಂದಿನ ಯುವಸಮೂಹ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪಪಂ ಸದಸ್ಯರಾದ ಅಂಜನ್ ಕುಮಾರ್, ಆರ್.ಮಧು, ಟಿ.ಪಿ.ಮಹೇಶ್, ಚಿದಾನಂದ್, ಜಯಮ್ಮ, ಶೀಲಾಶಿವಪ್ಪನಾಯಕ, ಆಶಾರಾಜಶೇಖರ್, ಮುಖ್ಯಾಧಿಕಾರಿ ಶ್ರೀನಾಥ್ ಬಾಬು, ಆರೋಗ್ಯ ನಿರೀಕ್ಷಕಿ ಆಪ್ಸಿಯಾ ಬಾನು, ಅಧಿಕಾರಿಗಳಾದ ಸದಾನಂದ್, ಪೌರಕಾರ್ಮಿಕರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್