Join The Telegram | Join The WhatsApp |
ಶಿವಮೊಗ್ಗ: ನಾನು ಹಿಂದೆ ಜೈಲಿನಲ್ಲಿ ಬಂಧಿಯಾಗಿದ್ದೆ. ಪೊಲೀಸ್ನವರು ನನಗೆ ಬಹಳ ಉಪದ್ರವ ಕೊಟ್ಟಿದ್ದರು .ಇಲ್ಲಿಯೇ ಪಕ್ಕದ ಪೊಲೀಸ್ ಠಾಣೆಯಲ್ಲಿ ಸೊಳ್ಳೆ ಕಚ್ಚಿಸಿಕೊಂಡು, ಅವರು ನೀಡಿದ್ದ ಬ್ಲ್ಯಾಂಕೆಟ್ ಹೊದ್ದು ಮಲಗಿದ್ದ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಾವು ಬಂಧನವಾಗಿದ್ದ ಸಂದರ್ಭವನ್ನು ಮೆಲುಕು ಹಾಕಿದರು.
ಶಿವಮೊಗ್ಗದ ಕೋಟೆ ಪೊಲೀಸ್ ಠಾಣಾ ಪಕ್ಕದಲ್ಲಿ ಪೂರ್ವ ಸಂಚಾರಿ ಪೊಲೀಸ್ ಠಾಣೆಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡುತ್ತಾ, ರೌಡಿಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಪೊಲೀಸರು ಸಶಕ್ತರಾಗಿದ್ದಾರೆ. ನಮ್ಮ ರಾಜ್ಯದಲ್ಲಿ ಮರ್ಯಾದಸ್ಥರು ತಲೆ ಎತ್ತಿ ಓಡಾಡುವಂತಾಗಬೇಕು. ರೌಡಿಗಳು ತಲೆ ತಗ್ಗಿಸಿ ನಡೆಯುವಂತಾಗಬೇಕು. ಅಂತಹ ಕಾನೂನನ್ನು ಜಾರಿಗೆ ತೋರುತ್ತೇವೆ ಎಂದರು.
ನಾನು ಐದು ವರ್ಷದ ಮಂತ್ರಿಯಲ್ಲ. ಕೇವಲ ಒಂದೂವರೆ ವರ್ಷಕ್ಕೆ ಗೃಹಮಂತ್ರಿಯಾಗಿದ್ದೇನೆ. ಈ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಗೆ ಸಾಕಷ್ಟು ಅನುದಾನವನ್ನು ನೀಡಿದ ತೃಪ್ತಿ ನನ್ನಲ್ಲಿದೆ. ಇನ್ನೂ ಜಿಲ್ಲೆಯಲ್ಲಿ ನೂತನ ಹೈಟೆಕ್ ಜೈಲನ್ನು ನಿರ್ಮಾಣ ಮಾಡಲಿದ್ದೇವೆ.
ವಿಐಪಿಗಳು ಆರೋಪಿಯಾದರೆ ಅವರನ್ನು ಬಂಧಿಸಿ ಜೈಲಿನಲ್ಲಿಡಲು 108 ಕೋಟಿ ರೂಪಾಯಿ ವೆಚ್ಚದಲ್ಲಿ ಹೈಟೆಕ್ ಜೈಲು ಕಟ್ಟಲು ಕೇಂದ್ರ ಸರ್ಕಾರದಿಂದ ಅನುಮತಿ ದೊರೆತಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಇಂತಹ ಜೈಲು ಸ್ಥಾಪನೆಯಾಗಲಿದ್ದು ಅದನ್ನು ಶಿವಮೊಗ್ಗದಲ್ಲಿ ನಿರ್ಮಿಸಲು ಯೋಜಿಸಲಾಗಿದೆ’ ಎಂದು ಹೇಳಿದರು.
Join The Telegram | Join The WhatsApp |