ಬೆಂಗಳೂರು: ಸರ್ಕಾರಿ ನೌಕರ ಮೃತಪಟ್ಟಲ್ಲಿ ಅವರ ಸಹೋದರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ಕಲ್ಪಿಸಲು ಅವಕಾಶವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಬೆಸ್ಕಾಂನಲ್ಲಿ ಲೈನ್ಮ್ಯಾನ್ ಆಗಿ ಸೇವೆ ಸಲ್ಲಿಸುತ್ತಿದ್ದ ವಿವಾಹಿತ ಸಹೋದರ ಮೃತಪಟ್ಟ ಹಿನ್ನೆಲೆಯಲ್ಲಿ ಅನುಕಂಪದ ಆಧಾರದಲ್ಲಿ ತನಗೆ ಉದ್ಯೋಗ ಒದಗಿಸಲು ಕೆಪಿಟಿಸಿಲ್ ಮತ್ತು ಬೆಸ್ಕಾಂಗೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ತಕರಾರು ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ ವಜಾಗೊಳಿಸಿತ್ತು.
ಈ ಆದೇಶ ಪ್ರಶ್ನಿಸಿ ತುಮಕೂರು ಜಿಲ್ಲೆ ಗೆದ್ಲಹಳ್ಳಿ ನಿವಾಸಿ ಜಿ.ಎಂ. ಪಲ್ಲವಿ ಎಂಬುವರು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.
ಈ ಮೇಲ್ಮನವಿಯನ್ನು ವಜಾಗೊಳಿಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ, ಮೇಲ್ಮನವಿದಾರೆಯು ಮೃತ ನೌಕರ (ಸಹೋದರ) ಸಾವನ್ನಪ್ಪಿದ ವೇಳೆ ಅವರ ಆದಾಯದ ಮೇಲೆ ತಾನು ಅಲವಂಬಿಸಿದ್ದೆ ಎಂಬುದನ್ನು ದೃಢಪಡಿಸುವ ಸಾಕ್ಷವನ್ನು ಒದಗಿಸಿಲ್ಲ.
ಅಂತೆಯೇ, ಅನುಕಂಪದ ಉದ್ಯೋಗ ಪಡೆದುಕೊಳ್ಳವುದನ್ನು ಸಮರ್ಥಿಸಿಕೊಳ್ಳವುದಕ್ಕಾಗಿ ಮೃತ ನೌಕರನ ಕುಟುಂಬವು ಆರ್ಥಿಕ ಮುಗ್ಗಟ್ಟಿಗೆ ತುತ್ತಾಗಿದೆ ಎಂಬುದನ್ನು ಸಾಬೀತುಪಡಿಸಲು ದಾಖಲೆಗಳು ಇಲ್ಲವಾಗಿದೆ.
ಹೀಗಾಗಿ ಮೇಲ್ಮನವಿದಾರೆಯನ್ನು ಅನುಕಂಪದ ಆಧಾರದಲ್ಲಿ ಉದ್ಯೋಗಕ್ಕೆ ಪರಿಗಣಿಸಲು ನಿರಾಕರಿಸಿದ ಏಕ ಸದಸ್ಯ ನ್ಯಾಯಪೀಠದ ಆದೇಶದಲ್ಲಿ ಸೂಕ್ತವಾಗಿದ್ದು, ಅದರಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.