Join The Telegram | Join The WhatsApp |
ಸವದತ್ತಿ : ಸವದತ್ತಿಯ ಹರ್ಷ ಸಕ್ಕರೆ ಕಾರ್ಖಾನೆಯಲ್ಲಿ 100 ಕೆಎಲ್ ಸಾಮರ್ಥ್ಯದ ಎಥೆನಾಲ್ ಘಟಕದ ಬಾಯ್ಲರ್ ಪ್ರದೀಪನ ಹಾಗೂ ಕಬ್ಬು ನುರಿಸುವ ಹಂಗಾಮಿಗೆ ಬಾಯ್ಲರ್ ಹಾಗೂ ಕೇನ್ ಕ್ಯಾರಿಯರ್ ಪೂಜೆ ಕಾರ್ಯಕ್ರಮ ಶುಕ್ರವಾರ ನಡೆಯಿತು.
ಹೂಲಿ ಮಠದ ಶ್ರೀ ಉಮೇಶ್ವರ ಮಹಾಸ್ವಾಮಿಗಳು ಸಂಭಯ್ಯನವರಮಠ ಅವರ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಕಾರ್ಖಾನೆಗೆ ಅತೀ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಪೂರೈಕೆ ಮಾಡಿದ 10 ರೈತರನ್ನು ಗೌರವಿಸಿ, ಸನ್ಮಾನಿಸಲಾಯಿತು.
2021-22 ನೇ ಸಾಲಿನಲ್ಲಿ ಕಬ್ಬು ಪೂರೈಕೆ ಮಾಡಿದ ಎಲ್ಲ ರೈತರಿಗೆ ಪ್ರತಿ ಟನ್ ಗೆ ಹೆಚ್ಚುವರಿಯಾಗಿ 100 ರೂ,ಗಳನ್ನು ನೀಡುವುದಾಗಿ ಕಾರ್ಖಾನೆಯ ಚೇರಮನ್, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಈ ಸಂದರ್ಭದಲ್ಲಿ ನೀಡಿದ ಸಂದೇಶದಲ್ಲಿ ಪ್ರಕಟಿಸಿದ್ದಾರೆ. ಒಟ್ಟಾರೆಯಾಗಿ 2021-22 ರ ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತರಿಗೆ ಕಬ್ಬು ಕಟಾವು ಹಾಗೂ ಕಬ್ಬು ಸಾಗಾಣಿಕೆಯನ್ನು ಹೊರತುಪಡಿಸಿ, ಪ್ರತಿ ಟನ್ ಗೆ 2700 ರೂ,ಗಳನ್ನು ಸಂದಾಯ ಮಾಡಿದಂತಾಗುತ್ತದೆ. ಇದು 2021-22ನೇ ಸಾಲಿಗೆ ಕೇಂದ್ರ ಸರ್ಕಾರ ನಿಗದಿಪಡಿಸಿದ ನ್ಯಾಯ ಮತ್ತು ಲಾಭದಾಯಕ ಬೆಲೆ (FRP) ದರಕ್ಕಿಂತ 198 ರೂ. ಹೆಚ್ಚುವರಿಯಾಗಿ ನೀಡಿದಂತಾಗುವುದು. 2022-23 ನೇ ಸಾಲಿಗೂ ಕೂಡಾ ಕೇಂದ್ರ ಸರ್ಕಾರ ನಿಗದಿ ಪಡಿಸಿದ ನ್ಯಾಯ ಹಾಗು ಲಾಭದಾಯಕ ಬೆಲೆಯನ್ನು ಆಧರಿಸಿ, ಯೋಗ್ಯ ದರವನ್ನು ನೀಡಲಾಗುವುದು ಎಂದು ತಿಳಿಸಿರುವ ಅವರು,ಈ ವರ್ಷವೂ ಕೂಡ ಒಳ್ಳೆಯ ಗುಣಮಟ್ಟದ ಕಬ್ಬುಗಳನ್ನು ಪೂರೈಕೆ ಮಾಡುವಂತೆ ಅವರು ರೈತರಲ್ಲಿ ಮನವಿ ಮಾಡಿದರು.
ಕಾರಖಾನೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮತ್ತು ನಿರ್ದೇಶಕ ಮೃಣಾಲ ಆರ್. ಹೆಬ್ಬಾಳಕರ್, ಈ ಭಾಗದ ಪ್ರಗತಿಪರ ಕಬ್ಬು ಬೆಳೆಗಾರ ರೈತರು, ಕಾರಖಾನೆಯ ಅಭಿಮಾನಿಗಳು, ಹಿರಿಯ ಅಧಿಕಾರಿಗಳಾದ ಸದಾಶಿವ ಥೋರತ, ಎನ್. ಎಮ್. ಪಾಟಿಲ ಹಾಗೂ ಯು. ಸಿ. ಚೌಕಿಮಠ ಮೊದಲಾದವರು ಉಪಸ್ಥಿತರಿದ್ದರು.
Join The Telegram | Join The WhatsApp |