ಹುಬ್ಬಳ್ಳಿ: ಗಾಂಧಿ ಬಾವಿಯ ನೀರನ್ನು ಬಳಸಿ, ಅಲ್ಲಿಂದಲೇ ಕೊಳೆ ತೊಳೆಯುವ ಕೆಲಸವನ್ನು ಮಾಡುತ್ತೇವೆ ಎಂದು ಡಿಸಿಎಂ ಡಿಕೆಶಿವಕುಮಾರ್ ಬೆಳಗಾವಿಯಿಂದಲೇ ಕಾಂಗ್ರೆಸ್ ಪತನ ಎನ್ನುವ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ, ಹುಬ್ಬಳ್ಳಿ, ಧಾರವಾಡ, ಹಾವೇರಿ, ಗದಗ ಜೈ ಬಾಪೂ, ಜೈ ಭೀಮ , ಜೈ ಸಂವಿಧಾನ ಕಾರ್ಯಕ್ರಮ ಜ. 21 ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜ.18 ರಂದು ಪೂರ್ವಭಾವಿ ಸಭೆ ನಡೆಸುತ್ತಿದ್ದೇವೆ. ಇದರಲ್ಲಿ ಸುರ್ಜೇವಾಲಾ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದರು.
ಅಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೇ ಮತ್ತು ಸಂಸದ ರಾಹುಲ್ ಗಾಂಧಿ ಬೆಳಗಾವಿಯಲ್ಲಿ ಗಾಂಧಿ ಪ್ರತಿಮೆಯನ್ನು ಅನಾವರಣ ಮಾಡಲಿದ್ದಾರೆ. ಇದು ಸರ್ಕಾರದ ಕಾರ್ಯಕ್ರಮ, ಸಿಎಂ ಪಾಲ್ಗೊಳ್ಳಲಿದ್ದಾರೆ. ಅಲ್ಲದೇ ಪಕ್ಷಭೇದ ಮರೆತು ಎಲ್ಲರನ್ನೂ ಇದಕ್ಕೆ ಆಹ್ವಾನಿಸಲಾಗುವುದು ಎಂದು ಹೇಳಿದರು.
ಜೈಬಾಪೂ, ಜೈಭೀಮ, ಜೈ ಸಂವಿಧಾನ ಎಂಬ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗ ವಹಿಸಬಹುದು. ಇದೊಂದು ದೊಡ್ಡ ಇತಿಹಾಸವಾಗಲಿದೆ ಎಂದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿಲ್ಲ. ಈ ಬಗ್ಗೆ ಗೃಹ ಸಚಿವರು ಪ್ರತಿಕ್ರಿಯೆ ನೀಡತ್ತಾರೆ ಎಂದರು.
ಕೆಪಿಸಿಸಿ ಅಧ್ಯಕ್ಷತೆ ಬದಲಾವಣೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಾನು ಸೇರಿದಂತೆ ಯಾರು ಕೂಡಾ ಬಹಿರಂಗವಾಗಿ ಮಾತನಾಡದಂತೆ ಹೈಕಮಾಂಡ್ ಸೂಚನೆ ನೀಡಿದೆ. ಇದರ ಬಗ್ಗೆ ಯಾರೇ ಮಾತನಾಡಿದರು ಹೈಕಮಾಂಡ್ ಈ ಬಗ್ಗೆ ಕ್ರಮಕೈಗೊಳ್ಳಲಿದೆ ಎಂದರು.
ಮಲ್ಲಿಕಾರ್ಜುನ ಖರ್ಗೇ ನಮ್ಮ ರಾಷ್ಟ್ರೀಯ ನಾಯಕರು ಅವರ ಮಾರ್ಗದರ್ಶನದಲ್ಲಿ ನಾವು ಕಾರ್ಯಕರ್ತರಾಗಿ ಮುನ್ನಡೆಯುತ್ತೇವೆ. ಮಹದಾಯಿ ವಿಚಾರವಾಗಿ ನಾವು ಸಚಿವ ಹೆಚ್.ಕೆ.ಪಾಟೀಲ್ ಅವರೊಂದಿಗೆ ಚರ್ಚೆ ಮಾಡಿದ್ದೇವೆ. ಈ ಹಿಂದೆ ದೆಹಲಿಯಲ್ಲಿ ಸಭೆ ಮಾಡಿದ್ದೇವೆ. ಪ್ರಧಾನಿಯವರಿಗೆ ಮನವಿ ಮಾಡಿದ್ದೇವೆ. ಸಂಬಂಧಪಟ್ಟ ಸಚಿವರಿಗೆ ಸೂಚನೆ ಕೊಡುವುದಾಗಿ ಪ್ರಧಾನಿ ಹೇಳಿದ್ದಾರೆ. ಮುಂದಿನ ಸಂಸತ್ ಅಧಿವೇಶನದಲ್ಲಿ ಮಹದಾಯಿ ಕುರಿತು ಒತ್ತಡ ತರುವ ಕೆಲಸ ಮಾಡಲಾಗುವುದು ಎಂದರು.
ಬಿಜೆಪಿಯ ನಕಲಿ ಗಾಂಧಿ ಎಂಬ ಟೀಕೆಗೆ ಪ್ರತಿಕ್ರಿಯೆ ನೀಡಿದ ಅವರು, ಗಾಂಧಿ ಇರೋದು ಒಂದೇ. ನಾವೆಲ್ಲ ಗಾಂಧಿ ವಂಶಸ್ಥರು, ಗಾಂಧಿ ಭಾರತದವರು, ಅದಕ್ಕಾಗಿ ಗಾಂಧಿ ಭಾರತದ ಕಾರ್ಯಕ್ರಮ ಮಾಡುತ್ತಿದ್ದೇವೆ. ಅಧ್ಯಕ್ಷತೆಯನ್ನು ಹೆಚ್.ಕೆ.ಪಾಟೀಲ್ ವಹಿಸಲಿದ್ದಾರೆ. ಪಕ್ಷ ಮತ್ತು ಸರ್ಕಾರ ಈ ಕಾರ್ಯಕ್ರಮದ ನಿರ್ವಹಣೆ ಜವಾಬ್ದಾರಿ ಹೊತ್ತಿದೆ ಎಂದರು.
ಸುಧೀರ ಕುಲಕರ್ಣಿ