ತುರುವೇಕೆರೆ: –ತುಮಕೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ತುರುವೇಕೆರೆಯಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮ ಯಶಸ್ವಿಯಾಗಿದೆ. ತುಮಕೂರು ಜಿಲ್ಲಾ ಕೇಂದ್ರದಿಂದ ತುರುವೇಕೆರೆ ತಾಲ್ಲೂಕು ಕೇಂದ್ರ ಸುಮಾರು 75 ಕಿಲೋಮೀಟರ್ ದೂರವಿದ್ದು, ಪ್ರತಿಯೊಬ್ಬ ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಸರ್ಕಾರಿ ವಾಹನದಲ್ಲಿ ಪ್ರಯಾಣಿಸಿದರೆ ಸಾವಿರಾರು ರೂ ವೆಚ್ಚವಾಗುತ್ತಿತ್ತು. ಬರಗಾಲ ಘೋಷಣೆಯ ಸಂದರ್ಭದಲ್ಲಿ ಅನಗತ್ಯವಾಗಿ ಸರ್ಕಾರಿ ಹಣ ವ್ಯಯವಾಗುವುದನ್ನು ತಪ್ಪಿಸಲು ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡ ಕೆ.ಎಸ್.ಆರ್.ಟಿ.ಸಿ. ಬಸ್ಸಿನಲ್ಲಿ ತುರುವೇಕೆರೆಗೆ ಆಗಮಿಸಿತು. ಬಸ್ಸಿನಲ್ಲಿ ಬಂದ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ತುರುವೇಕೆರೆ ತಹಸೀಲ್ದಾರ್ ರೇಣುಕುಮಾರ್ ಆತ್ಮೀಯವಾಗಿ ಸ್ವಾಗತಿಸಿದರು.
ಪಟ್ಟಣದ ಕೆ.ಹಿರಣ್ಣಯ್ಯ ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಶಿವಾನಂದ್ ಕರಾಳೆ, ಸರ್ಕಾರ ಜನರ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಬಗೆಹರಿಸುವ ದೃಷ್ಟಿಯಿಂದ ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಜನತಾ ದರ್ಶನ ನಡೆಸುತ್ತಿದೆ. ಜನತಾ ದರ್ಶನದಲ್ಲಿ ಸ್ವೀಕರಿಸಿದ ಅರ್ಜಿಗಳನ್ನು ಶೀಘ್ರಗತಿಯಲ್ಲಿ ವಿಲೇವಾರಿ ಮಾಡಿ ಜನರ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕಾರ್ಯೋನ್ಮುಖವಾಗಿದೆ. ಅಲ್ಲದೆ ಜನತಾ ದರ್ಶನದಲ್ಲಿ ಇಲಾಖೆಗಳಲ್ಲಿ ಸರ್ಕಾರದಿಂದ ದೊರಕುವ ಸವಲತ್ತು, ಯೋಜನೆಗಳ ಬಗ್ಗೆ ಮಾಹಿತಿಯನ್ನೂ ಸಹ ನೀಡಲಾಗುತ್ತಿದ್ದು, ಜನರು, ರೈತರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದರು.
ಜಿಲ್ಲಾ ಪಂಚಾಯತ್ ಸಿಇಒ ಜಿ.ಪ್ರಭು ಮಾತನಾಡಿ, ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕಾಗಿಯೇ ಯೋಜಿತವಾದ ಕಾರ್ಯಕ್ರಮ ಜನತಾ ದರ್ಶನವಾಗಿದೆ. ಸಮಸ್ಯೆಗಳು ಕೆಳಹಂತದಲ್ಲೇ ಉಳಿಯಬಾರದು, ಜನರು ತಾಲ್ಲೂಕು ಮಟ್ಟದ ಕಛೇರಿಗೆ ಅಲೆದು ಅಲ್ಲಿಯೂ ಬಗೆಹರಿಯದ ಸಮಸ್ಯೆಗಳನ್ನು ಜಿಲ್ಲಾ ಅಧಿಕಾರಿಗಳ ಮಟ್ಟದಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಜನತಾ ದರ್ಶನ ಸೂಕ್ತ ವೇದಿಕೆಯಾಗಿದೆ ಎಂದರು.
ತುಮಕೂರು ಜಿಲ್ಲಾಡಳಿತದಿಂದ ಈಗಾಗಲೇ 2 ತಾಲ್ಲೂಕು ಹಾಗೂ 1 ಹೋಬಳಿ ಮಟ್ಟದ ಜನತಾ ದರ್ಶನ ಕಾರ್ಯಕ್ರಮ ನಡೆಸಿದ್ದು, ಸುಮಾರು 1400 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಈ ಪೈಕಿ 937 ಅರ್ಜಿ ವಿಲೇವಾರಿ ಮಾಡಿದ್ದು, 463 ಅರ್ಜಿ ಬಾಕಿ ಉಳಿದಿದೆ. ಜನತಾ ದರ್ಶನದಲ್ಲಿ ಬರುತ್ತಿರುವ ಅರ್ಜಿಗಳಲ್ಲಿ ಹೆಚ್ಚು ಅರ್ಜಿಗಳು ಕಂದಾಯ ಹಾಗೂ ಗ್ರಾಮೀಣಾಭಿವೃದ್ದಿಗೆ ಸಂಬಂಧಿಸಿದ್ದಾಗಿದೆ. ಭೂಮಿ ಮಂಜೂರಾತಿ, ಹದ್ದುಬಸ್ತು, ಗಡಿನಿರ್ಧರಣೆ, ದುರಸ್ಥಿ, ಆರ್.ಡಿ.ಪಿ.ಆರ್. ನ 11 ಇ ಖಾತೆ, ವಸತಿ, ನಿವೇಶನ ಅರ್ಜಿ, ಅಭಿವೃದ್ದಿ, ಮೂಲಸೌಕರ್ಯಗಳ ಕುರಿತಾದ ಅರ್ಜಿಗಳು ಹೆಚ್ಚು ಬರುತ್ತಿವೆ.
ಇದರಲ್ಲಿ ಭೂಮಿ ಮಂಜೂರಾತಿ ಹೊರತುಪಡಿಸಿ ಬಹುತೇಕ ಎಲ್ಲಾ ಅರ್ಜಿಗಳನ್ನು ತಾಲ್ಲೂಕು ಮಟ್ಟದ ಅಧಿಕಾರಿಗಳೇ ಮನಸ್ಸು ಮಾಡಿದರೆ ಬಗೆಹರಿಸಬಹುದಾಗಿದೆ. ಭೂಮಿ ಮಂಜೂರಾತಿಗೆ ಸಂಬಂಧಿಸಿದಂತೆ ಸಮಿತಿ ರಚನೆಯಾಗಬೇಕಿರುವುದರಿಂದ ಅದೊಂದು ಸದ್ಯಕ್ಕೆ ಸಾಧ್ಯವಿಲ್ಲವಾಗಿದೆ ಎಂದ ಅವರು, ಅಧಿಕಾರಿಗಳು ಜನರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಬೇಕು. ಗ್ರಾಮೀಣ ಪ್ರದೇಶದಿಂದ ಹತ್ತಾರು ಕಿಲೋಮೀಟರ್ ದೂರವಿರುವ ಪಟ್ಟಣಕ್ಕೆ ಬಂದು ತಮ್ಮ ಕಛೇರಿಗೆ ದಿನನಿತ್ಯ ಅಲೆಯುವಂತೆ ಮಾಡಬಾರದು. ಸಕಾರಾತ್ಮಕ ಮನೋಭಾವ ಬೆಳೆಸಿಕೊಂಡು ಜನರ ಸಮಸ್ಯೆಗಳನ್ನು ಇತ್ಯರ್ಥಗೊಳಿಸುವ, ಜನರ ಆಶೋತ್ತರಗಳನ್ನು ಪೂರೈಸುವ ನಿಟ್ಟಿನಲ್ಲಿ ಅಧಿಕಾರಿಗಳು ಹೆಜ್ಜೆಯನ್ನಿಡಬೇಕೆಂದರು.
ಜನತಾ ದರ್ಶನ ಉದ್ಘಾಟಿಸಿ ಮಾತನಾಡಿದ ಶಾಸಕ ಎಂ.ಟಿ.ಕೃಷ್ಣಪ್ಪ, ಸರ್ಕಾರ ಉತ್ತಮ ಕಾರ್ಯಕ್ರಮ ಆಯೋಜಿಸಿದೆ. ಬರಗಾಲದ ಪರಿಸ್ಥಿತಿಯಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ. ರೈತರು, ಜನಸಾಮಾನ್ಯರು ತಮ್ಮ ಕೆಲಸಕಾರ್ಯಗಳಿಗೆ ಮೇಲ್ಮಟ್ಟದ ಅಧಿಕಾರಿಗಳನ್ನು ಕಾಣಲು ಜಿಲ್ಲಾ ಕೇಂದ್ರಕ್ಕೆ ಹೋಗಲು ಸಾಧ್ಯವಿಲ್ಲ. ಇದನ್ನು ಅರಿತು ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ ಜನತಾದರ್ಶನ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡ ತಾಲ್ಲೂಕು ಕೇಂದ್ರಕ್ಕೆ ಆಗಮಿಸಿ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಜನತಾ ದರ್ಶನವನ್ನು ತಾಲೂಕು ಮಟ್ಟದಲ್ಲಿ ನಡೆಸುತ್ತಿರುವುದು ಸ್ವಾಗತಾರ್ಹ ಎಂದರು.
ಜನತಾ ದರ್ಶನ ಕಾರ್ಯಕ್ರಮ ಜನರಿಗಾಗಿ ಇರುವ ಕಾರ್ಯಕ್ರಮವಾಗಿದೆ. ಜನರು ಖುದ್ದು ಆಗಮಿಸಿ ತಮ್ಮ ಸಮಸ್ಯೆಗಳನ್ನು ಜಿಲ್ಲಾ ಮಟ್ಟದ ಅಧಿಕಾರಿಗಳ ಸಮಕ್ಷಮದಲ್ಲಿ ಬಗೆಹರಿಸಿಕೊಳ್ಳಲು ಇದೊಂದು ಉತ್ತಮ ವೇದಿಕೆಯಾಗಿದೆ. ಆದರೆ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರೇ ಬಾರದಿರುವುದು ಪ್ರಚಾರದ ಕೊರತೆಯೋ? ಎಂಬ ಭಾವನೆ ಕಾಡುತ್ತಿದೆ. ಪ್ರತಿನಿತ್ಯ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ನೂರಾರು ರೈತರು ಕಂದಾಯ ಇಲಾಖೆ, ಕೃಷಿ, ತೋಟಗಾರಿಕೆ, ಸರ್ವೆ, ಪೊಲೀಸ್ ಠಾಣೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಎಡತಾಕುತ್ತಿದ್ದಾರೆ. ತಾಲೂಕು ಮಟ್ಟದ ಅಧಿಕಾರಿಗಳಿಂದ ಬಗೆಹರಿಸಲಾಗದ ಸಮಸ್ಯೆಗಳನ್ನು ಜಿಲ್ಲಾ ಮಟ್ಟದ ಅಧಿಕಾರಿಗಳ ಸಮ್ಮುಖ ಪರಿಹರಿಸಿಕೊಳ್ಳುವ ಅವಕಾಶ ನಿಮ್ಮ ಮುಂದಿದ್ದು, ರೈತರು, ನಾಗರೀಕರು ತಮ್ಮ ಸಮಸ್ಯೆ ಕುರಿತ ಅರ್ಜಿ ನೀಡಿ ಪರಿಹರಿಸಿಕೊಳ್ಳಿ ಎಂದ ಅವರು, ತಾಲ್ಲೂಕು ಮಟ್ಟದ ಅಧಿಕಾರಿಗಳು ಜನರ, ರೈತರ ಸಮಸ್ಯೆಗೆ ಸ್ಪಂದಿಸಬೇಕು. ನಾಗರೀಕರು ಕಛೇರಿಗೆ ಬಂದಾಗ ಸೌಜನ್ಯದಿಂದ ವರ್ತಿಸಿ ಅವರ ಸಮಸ್ಯೆಗೆ ಪರಿಹಾರ ಒದಗಿಸಿಕೊಡಬೇಕೆಂದು ಕಿವಿಮಾತು ಹೇಳಿದರು.
ಜನತಾ ದರ್ಶನದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಜನರು ಸಮಸ್ಯೆಗಳ ಕುರಿತಂತೆ ಅರ್ಜಿ ಸಲ್ಲಿಸಿದರು. ಕಂದಾಯ, ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಪಟ್ಟಣ ಪಂಚಾಯ್ತಿ, ರೇಷ್ಮೆ, ಖಜಾನೆ, ಲೋಕೋಪಯೋಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಯ ಕೊಠಡಿ ತೆರೆದು ಸವಲತ್ತುಗಳ ಕುರಿತಂತೆ ಜನರಿಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಭೂಸ್ವಾಧೀನಾಧಿಕಾರಿ ಮಂಜುನಾಥ್, ವೆಂಕಟಸ್ವಾಮಿ, ನಿರಂಜನ್, ಉಪವಿಭಾಗಾಧಿಕಾರಿ ಸಪ್ತಶ್ರೀ, ತಹಸೀಲ್ದಾರ್ ರೇಣುಕುಮಾರ್, ತಾಪಂ ಇಒ ಶಿವರಾಜಯ್ಯ, ಪಪಂ ಮುಖ್ಯಾಧಿಕಾರಿ ಶ್ರೀನಾಥ್ ಬಾಬು, ಬಿಇಒ ಸೋಮಶೇಖರ್, ಕೃಷಿ ಸಹಾಯಕ ನಿರ್ದೇಶಕಿ ಪೂಜಾ, ಲೋಕೋಪಯೋಗಿ ಇಲಾಖೆ ಎಇಇ ಪ್ರಭಾಕರ್, ಮೀನುಗಾರಿಕೆ ಸಹಾಯಕ ನಿರ್ದೇಶಕ ಮೋಹನ್ ಕುಮಾರ್, ತೋಟಗಾರಿಕೆ ಸಹಾಯಕ ನಿರ್ದೇಶಕ ಆಂಜನೇಯರೆಡ್ಡಿ ಸೇರಿದಂತೆ ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳು, ನಾಗರೀಕರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್