Join The Telegram | Join The WhatsApp |
ಬೈಲಹೊಂಗಲ: ಸಾಂಸ್ಕೃತಿಕ ಹಿನ್ನೆಲೆಯಿರುವ ಕನ್ನಡದ ಬಗ್ಗೆ ನಮಗೆಲ್ಲ ಹೆಮ್ಮೆಯಿರಬೇಕು ಎಂದು ಮುಖ್ಯಶಿಕ್ಷಕ ಎನ್.ಆರ್. ಠಕ್ಕಾಯಿ ಹೇಳಿದರು. ತಾಲೂಕಿನ ಬೂದಿಹಾಳದ ಸರಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ 67 ನೆಯ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಕ್ಕಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಮಕ್ಕಳಿಗೆ ಕರ್ನಾಟಕದ ಏಕೀಕರಣದ ಇತಿಹಾಸ, ಮಹನೀಯರ ಹೋರಾಟದ ಬಗ್ಗೆ ಅರಿವು ಇರಬೇಕು ಎಂದು ಅವರು ಹೇಳಿದರು. ವಿದ್ಯಾರ್ಥಿಗಳು ಜಗತ್ತಿನಾದ್ಯಂತ ಕನ್ನಡದ ಕಹಳೆ ಮೊಳಗಿಸುವ ಸಾಧನೆ ಮಾಡಬೇಕು ಎಂದರು.
ಶಿಕ್ಷಕರಾದ ಸುನೀಲ ಭಜಂತ್ರಿ ಮಾತನಾಡಿ ಹರಿದು ಹಂಚಿ ಹೋಗಿದ್ದ ಕನ್ನಡದ ಪ್ರದೇಶಗಳನ್ನು ಒಗ್ಗೂಡಿಸಲು ಆಲೂರು ವೆಂಕಟರಾಯರು, ಸರ್ ಸಿದ್ದಪ್ಪ ಕಂಬಳಿ, ಡೆಪ್ಯೂಟಿ ಚೆನಬಸಪ್ಪ ಮುಂತಾದವರು ಸಾಕಷ್ಟು ಶ್ರಮಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು. ಕನ್ನಡತನವನ್ನು ಜೀವಂತವಾಗಿಸಿಕೊಂಡವರು ನಿಜವಾದ ಕನ್ನಡಿಗರು ಎಂದು ಅವರು ಹೇಳಿದರು. ವಿದ್ಯಾರ್ಥಿಗಳು ತಮ್ಮ ಭಾಷಣ, ಗಾಯನದಲ್ಲಿ ಕನ್ನಡಾಭಿಮಾನವನ್ನು ಪ್ರದರ್ಶಿಸಿದರು. ಕನ್ನಡ ಮಾತೆ, ಬೆಳವಡಿ ಮಲ್ಲಮ್ಮ, ಕಿತ್ತೂರು ಚೆನ್ನಮ್ಮ, ಒನಕೆ ಓಬವ್ವ, ಸಂಗೊಳ್ಳಿ ರಾಯಣ್ಣನ ವೇಷ ಧರಿಸಿ ಮಕ್ಕಳು ಖುಷಿಪಟ್ಟರು.
ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ನಡೆದ ಮೆರವಣಿಗೆ ಎಲ್ಲರ ಗಮನ ಸೆಳೆಯಿತು. ರಾಜ್ಯೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ಕನ್ನಡ ಪುಸ್ತಕ ಪರಿಚಯ, ಕವನ ವಾಚನ, ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನದ ರೂಪದಲ್ಲಿ ಕನ್ನಡ ಪುಸ್ತಕಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಜೆ.ಆರ್.ನರಿ, ಪಿ.ಎಸ್ ಗುರುನಗೌಡರ, ಎಸ್.ಟಿ ಚೌಗಲಾ, ಎಸ್.ವಿ.ಬಳಿಗಾರ, ಆರ್.ಸಿ.ಸೊರಟೂರ, ವಿ.ಬಿ.ಪಾಟೀಲ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈಶ್ವರಿ ಮೆಕ್ಕೇದ ಸ್ವಾಗತಿಸಿದರು. ರಾಜೇಶ್ವರಿ ಸೊಗಲದ ನಿರೂಪಿಸಿದರು. ಕಾವೇರಿ ಬೋಬಡೆ ವಂದಿಸಿದರು. ತನುಜಾ ಬಡಿಗೇರ ಪ್ರಾರ್ಥಿಸಿದರು.
ವರದಿ : ದುಂಡಪ್ಪ ಹೂಲಿ
Join The Telegram | Join The WhatsApp |