ಬೆಂಳೂರು: ರಾಜ್ಯ ಸರ್ಕಾರದಿಂದ ಬರಪೀಡಿತ ತಾಲೂಕುಗಳ ಘೋಷಣೆಯನ್ನು ಮುಂದೂಡಲಾಗಿದೆ. ಅಲ್ಲದೇ ಮತ್ತೊಮ್ಮೆ ಬರ ಸಮೀಕ್ಷೆ ನಡೆಸಿ, ಆ ಬಳಿಕ ಬರಪೀಡಿತ ತಾಲೂಕುಗಳ ಘೋಷಣೆಯ ನಿರ್ಧಾರಕ್ಕೆ ಬರಲಾಗಿದೆ. ಸದ್ಯಕ್ಕೆ 62 ತಾಲೂಕುಗಳ ಪಟ್ಟಿ ಮಾತ್ರ ಸಿದ್ಧವಿದೆ. ಇನ್ನೂ 134 ತಾಲೂಕುಗಳ ಸಮೀಕ್ಷಾ ಕಾರ್ಯ ನಡೆಯಬೇಕಿದೆ.
ಹೀಗಾಗಿ ಸಮೀಕ್ಷೆ ಪೂರ್ಣಗೊಂಡ ಬಳಿಕ ಒಟ್ಟಿಗೇ ಬರಗಾಲ ಘೋಷಣೆಯ ತೀರ್ಮಾನಕ್ಕೆ ರಾಜ್ಯ ಸಂಪುಟ ಉಪಸಮಿತಿ ನಿರ್ಧಾರಕ್ಕೆ ಬಂದಿದೆ.
ಹೌದು ಆಗಸ್ಟ್.19ರವರೆಗೆ ನಡೆದ ಸಮೀಕ್ಷೆಯ ಪ್ರಕಾರ ಕೇಂದ್ರದ ಮಾನದಂಡಗಳ ಅನುಸಾರ 62 ತಾಲೂಕುಗಳು ಮಾತ್ರವೇ ಬರಪೀಡಿತ ತಾಲೂಕುಗಳು ಎಂದು ಘೋಷಿಸಲು ಅರ್ಹವಾಗಿವೆ.
ಹೀಗಾಗಿ ಆಗಸ್ಟ್ ನಲ್ಲಿ ತೀವ್ರ ಮಳೆ ಕೊರತೆಯಿಂದಾಗಿ ಬರದ ಛಾಯೆ ಇರುವ ಬೇರೆ ಬೇರೆ 134 ತಾಲೂಕುಗಳಲ್ಲಿ ಇನ್ನೊಂದು ವಾರದೊಳಗೆ ಮತ್ತೆ ಸಮೀಕ್ಷೆ ನಡೆಸಿದ ನಂತ್ರ ಒಟ್ಟು ಬರ ಪೀಡಿತ ತಾಲೂಕುಗಳ ಪಟ್ಟಿಯನ್ನು ಪ್ರಕಟಿಸಲು ರಾಜ್ಯ ಸಚಿವ ಸಂಪುಟ ಉಪಸಮಿತಿ ಸಭೆ ತೀರ್ಮಾನ ಕೈಗೊಂಡಿದೆ.
ಈ ಹಿನ್ನಲೆಯಲ್ಲಿ ಸೋಮವಾರ ಬರ ಪೀಡಿತ ತಾಲೂಕುಗಳ ಪಟ್ಟಿ ಪ್ರಕಟವಾಗೋ ನಿರೀಕ್ಷೆಯಲ್ಲಿದ್ದವರಿಗೆ ಸುಳ್ಳಾಗಿದೆ. ಬದಲಾಗಿ ಮತ್ತೊಮ್ಮೆ ಬರದ ಬಗ್ಗೆ ಸಮೀಕ್ಷೆ ನಡೆಸಿ, ನಂತ್ರವೇ ಒಟ್ಟಾಗಿ ಎಷ್ಟು ತಾಲೂಕುಗಳಲ್ಲಿ ಬರವಿದೆಯೋ ಆ ತಾಲೂಕುಗಳ ಒಟ್ಟಾರೆ ಪಟ್ಟಿಯನ್ನು ಮುಂದಿನ ಸಚಿವ ಸಂಪುಟ ಉಪ ಸಮಿತಿಯ ಸಭೆಯಲ್ಲಿ ಪ್ರಕಟಿಸೋ ಸಾಧ್ಯತೆ ಇದೆ.
ಅಂದಹಾಗೇ ರಾಜ್ಯದಲ್ಲಿನ ಬರ ಪರಾಮರ್ಶಿಸಲು ನಿನ್ನೆ ವಿಧಾನಸೌಧದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ಅಧ್ಯಕ್ಷತೆಯಲ್ಲಿ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಕೃಷಿ ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆಯ ಉಪ ಸಮಿತಿ ಸಭೆ ನಡೆಯಿತು. ಈ ಸಭೆಯಲ್ಲೇ ಬರಗಾಲ ಸಮೀಕ್ಷೆ ಪೂರ್ಣಗೊಂಡ ನಂತ್ರ, ಒಟ್ಟಿಗೆ ಬರಪೀಡಿತ ತಾಲೂಕುಗಳ ಪಟ್ಟಿ ಪ್ರಕಟಿಸೋ ನಿರ್ಧಾರವನ್ನು ಕೈಗೊಳ್ಳಲಾಗಿದೆ.