ಬೆಂಗಳೂರು: ”ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಶಿವಮೊಗ್ಗದಲ್ಲಿ ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದೇ ಘಟನೆಗೆ ಕಾರಣವಾಗಿದೆ” ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.
ಆರ್.ಟಿ. ನಗರ ನಿವಾಸದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ”ಶಿವಮೊಗ್ಗ ಪ್ರಕ್ಷುಬ್ಧ ವಾತಾವರಣ ಇರುವ ನಗರ. ಅಲ್ಲಿ ಹಿಂದೆ ಹಲವಾರು ಘಟನೆಗಳು ನಡೆದಿವೆ. ಇಂತಹ ಧಾರ್ಮಿಕ ಘಟನೆ ನಡೆದಾಗ ಪೊಲೀಸರು ಸೂಕ್ತ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿಲ್ಲ” ಎಂದು ಆರೋಪಿಸಿದರು.
”ಶಿವಮೊಗ್ಗದ ಮೂರು ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಇಂತ ಘಟನೆ ನಡೆಯುತ್ತದೆ. ಇಂತ ಸ್ಟೇಷನ್ಗೆ ವರ್ಗಾವಣೆ ಮಾಡುವಾಗ ಸಮರ್ಥ ಅಧಿಕಾರಿ ಹಾಕಬೇಕು. ಸ್ವಹಿತಾಸಕ್ತಿಗಳಿಗೆ ಬಲಿಯಾಗಿ ಅಧಿಕಾರಿಗಳ ವರ್ಗಾವಣೆ ಮಾಡಿದರೆ, ಅವರು ಕಾನೂನು ಕಾಪಾಡುವ ಬದಲು ಬೇರೆ ಕೆಲಸದಲ್ಲಿಯೇ ಮಗ್ನರಾಗುತ್ತಾರೆ.
ಇದರಿಂದ ಸಮಾಜಘಾತುಕ ಶಕ್ತಿಗಳಿಗೆ ಕುಮ್ಮಕ್ಕು ಸಿಗುತ್ತದೆ. ಇದರ ಮೂಲ ಪ್ರತಿ ಜಿಲ್ಲೆಯಲ್ಲಿ ಕ್ಲಬ್, ರಿಯಲ್ ಎಸ್ಟೇಟ್ ಮಾಫಿಯಾ ಶುರುವಾಗಿದೆ. ಸಮಗ್ರವಾಗಿ ನಿಭಾಯಿಸಬೇಕು. ಶಾಂತಿ ಕಾಪಾಡಬೇಕು. ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು.
ಸರ್ಕಾರದಿಂದ ಪೊಲೀಸರಿಗೆ ಒಂದು ಸ್ಪಷ್ಟ ನಿರ್ದೇಶನ ಹೋಗಬೇಕು. ಅಧಿಕಾರಿಗಳನ್ನು ಯಾವುದೇ ಮುಲಾಜಿಲ್ಲದೇ ಟ್ರಾನ್ಸ್ಫರ್ ಮಾಡಿದ್ದರೆ, ಇಂತ ಘಟನೆ ನಿಲ್ಲುತ್ತದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.