Join The Telegram | Join The WhatsApp |
ಮಂಡ್ಯ: ಅರಣ್ಯ ಪ್ರದೇಶದ ಒತ್ತುವರಿ, ಕಲ್ಲು ಗಣಿಗಾರಿಕೆ, ಕಲ್ಲು ಸ್ಫೋಟ ಮುಂತಾದ ಚಟುವಟಿಕೆ ಗಳಿಗೆ ಬೆದರಿರುವ ಚಿರತೆಗಳು ನಾಡಿನತ್ತ ಬರುತ್ತಿವೆ. ಕಳೆದ ವರ್ಷ ವರ್ಷ ಗಳಿಂದೀಚೆಗೆ ಜನವಸತಿ ಪ್ರದೇಶದಲ್ಲೇ ಚಿರತೆಗಳು ಕಾಣಿಸಿ ಕೊಳ್ಳುತ್ತಿದ್ದು, ಜನ, ಜಾನುವಾರುಗಳಿಗೆ ಪ್ರಾಣಸಂಕಟ ಎದುರಾಗಿದೆ. ಮೊದಲೆಲ್ಲಾ ಕಾಡಂಚಿನ ಗ್ರಾಮಗಳಲ್ಲಿ ಚಿರತೆಗಳ ದರ್ಶನ ವಾಗುತ್ತಿತ್ತು. ಆದರೆ, ಈಚೆಗೆ ಎಲ್ಲೆಡೆ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು, ಜನರು ಆತಂಕಗೊಂಡಿದ್ದಾರೆ. ಒಂದು ವರ್ಷದಿಂದೀಚೆಗೆ 100ಕ್ಕೂ ಹೆಚ್ಚು ಕಡೆ ಚಿರತೆಗಳು ಕಾಣಿಸಿಕೊಂಡಿವೆ. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಕೆಲವೆಡೆ ಮಾತ್ರ ಬೋನು ಇರಿಸಿ ಚಿರತೆ ಸೆರೆ ಹಿಡಿದಿದ್ದಾರೆ. ಬಹುತೇಕ ಕಡೆಗಳಲ್ಲಿ ಚಿರತೆ ಸೆರೆಹಿಡಿಯುವಲ್ಲಿ ಇಲಾಖೆ ವಿಫಲವಾಗಿದ್ದು, ಜನರು ಭಯದಿಂದಲೇ ಬದುಕುವಂತಾಗಿದೆ. ಡಿ.19ರಂದು ತಾಲ್ಲೂಕಿನ ಲೋಕಸರ ಗ್ರಾಮದಲ್ಲಿ ನಾಯಿ ತಿನ್ನಲು ಬಂದ ಚಿರತೆಯೊಂದು ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿತ್ತು. ಕಳೆದ ಹಲವು ತಿಂಗಳುಗಳಿಂದ ಚಿರತೆ ಹಾವಳಿಯಿಂದ ಗ್ರಾಮಸ್ಥರು ನಲುಗಿ ಹೋಗಿದ್ದರು. ಜನರು ಹಲವು ಬಾರಿ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರೂ ಅರಣ್ಯ ಇಲಾಖೆ ಸ್ಪಂದಿಸಿರಲಿಲ್ಲ. ಕಡೆಗೂ ಜನರ ಒತ್ತಡಕ್ಕೆ ಮಣಿದ ಇಲಾಖೆ ಅಧಿಕಾರಿಗಳು ಬೋನು ಇರಿಸಿದ್ದರು. ಚಿರತೆ ಸೆರೆಯಾದ ನಂತರ ಗ್ರಾಮಸ್ಥರು ನಿರಾಳರಾಗಿದ್ದಾರೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಜನರು ಹೈರಾಣಾಗಿದ್ದಾರೆ. ವರ್ಷದಿಂದೀಚೆಗೆ ಚಿರತೆ ದಾಳಿಯಿಂದ 15 ಮಂದಿ ಗಾಯಗೊಂಡಿದ್ದಾರೆ. 300ಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿವೆ. ಮಳವಳ್ಳಿ ತಾಲ್ಲೂಕಿನಲ್ಲಿ ಮೊದಲಿನಿಂದಲೂ ಚಿರತೆ ಹಾವಳಿ ಹೆಚ್ಚಾಗಿದೆ. ರೈತರು ಸಾಕು ಪ್ರಾಣಿಗಳನ್ನು ಕಳೆದುಕೊಂಡಿದ್ದಾರೆ. ತಾಲ್ಲೂಕಿನಲ್ಲಿ ಸಾವಿರಾರು ಎಕರೆ ಅರಣ್ಯ ಪ್ರದೇಶವಿದ್ದು, ದಡಮಳ್ಳಿ, ಅಂತರವಳ್ಳಿ, ಗಾಣಾಳು, ಬಸವನಬೆಟ್ಟ, ಧನಗೂರು, ಬಾಳೆಹೊನ್ನಿಗ, ಕುಂದೂರು, ಜವನಗಹಳ್ಳಿ ಗುಡ್ಡ, ಸೊಪ್ಪಿನ ಗುಡ್ಡ, ನೆಟ್ಕಲ್, ಶಿಂಷಾ ಅರಣ್ಯ ಪ್ರದೇಶಗಳಲ್ಲಿ ಚಿರತೆಗಳ ಸಂತತಿ ಹೆಚ್ಚಾಗಿದೆ. ಕಳೆದ ಏಳೆಂಟು ತಿಂಗಳ ಹಿಂದೆ ತಾಲ್ಲೂಕಿನ ಉತ್ತೂರು, ದಾಸನದೊಡ್ಡಿ ಗ್ರಾಮಗಳಲ್ಲಿ ವ್ಯಕ್ತಿಯೊಬ್ಬರ ಮೇಲೆ ಚಿರತೆ ದಾಳಿ ಮಾಡಿ ಗಾಯಗೊಳಿಸಿದ ಘಟನೆ ಕೂಡ ನಡೆದಿದೆ. ಜನರು ಜಮೀನುಗಳಿಗೆ ತೆರಳಲು ಹಿಂದೇಟು ಹಾಕುವಂತಾಗಿದೆ. ಕಳೆದ ನಾಲ್ಕೈದು ತಿಂಗಳ ಹಿಂದೆ ತಾಲ್ಲೂಕಿನ ಸುಣ್ಣದದೊಡ್ಡಿ, ಬಾಳೆಹೊನ್ನಿಗ, ಹಂಗ್ರಾಪುರ ಗ್ರಾಮಗಳಲ್ಲಿ ಮೂರು ಚಿರತೆಗಳು ಅರಣ್ಯ ಇಲಾಖೆಯ ಬೋನಿಗೆ ಬಿದ್ದಿವೆ. ನಾಗಮಂಗಲ ತಾಲ್ಲೂಕಿನ ಕಸಬಾ, ಬಿಂಡಿನವಿಲೆ, ದೇವಲಾಪುರ, ಹೊಣಕೆರೆ ಸೇರಿದಂತೆ ಬೆಳ್ಳೂರು ಹೋಬಳಿಗಳ ಭಾಗಗಳಲ್ಲಿ ಚಿರತೆ ಹಾವಳಿ ಇದೆ. ಅಲ್ಲದೇ ತಾಲ್ಲೂಕಿನಲ್ಲಿ ಕಳೆದ ಒಂದು ವರ್ಷದಿಂದ ವಿವಿಧ ಭಾಗಗಳಲ್ಲಿ ಮೂರು ಚಿರತೆ ಸೆರೆ ಹಿಡಿಯಲಾಗಿದೆ. ತಾಲ್ಲೂಕಿನಲ್ಲಿ ಒಂದು ವರ್ಷದಿಂದ ಇಬ್ಬರ ಮೇಲೆ ಚಿರತೆ ದಾಳಿಯಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ವಿವಿಧ ಗ್ರಾಮಗಳ ವ್ಯಾಪ್ತಿಯಲ್ಲಿ 30 ಜಾನುವಾರುಗಳು ಚಿರತೆ ದಾಳಿಗೆ ಸಾವನ್ನಪ್ಪಿವೆ
Join The Telegram | Join The WhatsApp |