Ad imageAd image

ವಿಘ್ನ ಸಂತೋಷಿಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ, ನನಗೆ ಅಭಿವೃದ್ಧಿ ಮಾತ್ರ ಗೊತ್ತು : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Bharath Vaibhav
ವಿಘ್ನ ಸಂತೋಷಿಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ, ನನಗೆ ಅಭಿವೃದ್ಧಿ ಮಾತ್ರ ಗೊತ್ತು : ಸಚಿವೆ ಲಕ್ಷ್ಮೀ ಹೆಬ್ಬಾಳಕರ್
WhatsApp Group Join Now
Telegram Group Join Now

ಬೆಳಗಾವಿ: ಅನಗತ್ಯ ರಾಜಕೀಯ ಮಾಡುವ ವಿಘ್ನ ಸಂತೋಷಿಗಳ ಕುರಿತು ನಾನು ತಲೆಕೆಡಿಸಿಕೊಳ್ಳುವುದಿಲ್ಲ, ಅಭಿವೃದ್ಧಿ ವಿಚಾರದಲ್ಲಿ ನಾನು ಎಂದೂ ರಾಜಕೀಯ ಮಾಡುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಸುಳಗಾ ಗ್ರಾಮದಲ್ಲಿ ಶನಿವಾರ, ರಾಯಚೂರು – ಬಾಚಿ ರಾಜ್ಯ ಹೆದ್ದಾರಿಯ 20 ಕಿಮೀ ಅಭಿವೃದ್ಧಿಪಡಿಸುವ 9 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಲೋಕೋಪಯೋಗಿ ಸಚಿವರೂ ಆಗಿರುವ ಸತೀಶ್ ಜಾರಕಿಹೊಳಿ ಜೊತೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಹೆಬ್ಬಾಳಕರ್, ಕೇವಲ ಭಾಷೆ, ಧರ್ಮದ ವಿಚಾರದಲ್ಲಿ ಜನರನ್ನು ಭಾವನಾತ್ಮಕವಾಗಿ ಕೆರಳಿಸಿ ರಾಜಕೀಯ ಮಾಡುತ್ತಾರೆ. ಅಂತವರಿಗೆ ಅಭಿವೃದ್ಧಿಯ ಅರ್ಥವೇ ಗೊತ್ತಿಲ್ಲ. ಅವರು ವಿಘ್ನ ಸಂತೋಷಿಗಳು. ಈ ಬಾರಿ ನಿರಂತರ ಮಳೆಯಿಂದಾಗಿ ಹಲವು ಕಾಮಗಾರಿಗಳು ವಿಳಂಬವಾಗಿವೆ. ಆದರೆ ಅಭಿವೃದ್ಧಿ ವಿಚಾರದಲ್ಲಿ ನಾನು ಯಾವತ್ತೂ ರಾಜಕೀಯ ಮಾಡುವುದಿಲ್ಲ, ಯಾರು, ಯಾವ ಪಕ್ಷ, ಯಾವ ಜಾತಿ ಎನ್ನುವ ಕುರಿತು ಯೋಚಿಸುವುದೂ ಇಲ್ಲ ಎಂದರು.

ಮಕ್ಕಳನ್ನು ಶಾಲೆಗೆ ದಾಖಲು ಮಾಡಿಸಲು, ಹಾಸ್ಟೆಲ್ ಗೆ ಸೇರಿಸಲು, ವರ್ಗಾವಣೆ ಮಾಡಿಸಿಕೊಳ್ಳಲು ಹೀಗೆ ಹಲವು ವಿಚಾರಗಳಿಗೆ ಜನರು ನನ್ನ ಬಳಿ ಬರುತ್ತಾರೆ. ನಿತ್ಯ ನೂರಾರು ಜನರು ಬಂದು ಕೆಲಸ ಮಾಡಿಸಿಕೊಳ್ಳುತ್ತಾರೆ. ಯಾವುದೇ ವಿಷಯಕ್ಕೆ ನನ್ನ ಬಳಿ ಬಂದರೂ ಪರಿಹಾರ ನೀಡುತ್ತಾ ಬಂದಿದ್ದೇನೆ. ಇಡೀ ರಾಜ್ಯಕ್ಕೆ ನಾನು ಮಂತ್ರಿ ಇರಬಹುದು, ಆದರೆ ಗ್ರಾಮೀಣ ಕ್ಷೇತ್ರಕ್ಕೆ ಎಂದಿಗೂ ಮನೆ ಮಗಳು ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಯುವರಾಜ ಕದಂ ಮಾತನಾಡಿ, ಲಕ್ಷ್ಮೀ ಹೆಬ್ಬಾಳಕರ್ ಪ್ರತಿ ವರ್ಷ ಸಾವಿರಾರು ಕೋಟಿ ರೂ. ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡುತ್ತಿದ್ದಾರೆ. ಯಾವುದೇ ಸಮಸ್ಯೆ ಹೇಳಿದರೂ ತಕ್ಷಣ ಸ್ಪಂದಿಸಿ ಕೆಲಸ ಮಾಡಿಕೊಡುತ್ತಾರೆ. ಇಂತವರನ್ನು ಶಾಸಕರನ್ನಾಗಿ ಪಡೆದಿರುವುದು ನಮ್ಮ ಪುಣ್ಯ ಎಂದರು.
ಸಚಿವ ಸತೀಶ್ ಜಾರಕಿಹೊಳಿ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಯುವ ಕಾಂಗ್ರೆಸ್ ಮುಖಂಡರಾದ ಮೃಣಾಲ್‌ ಹೆಬ್ಬಾಳಕರ್, ಮುಖಂಡರಾದ ಬಾಬಣ್ಣ ನರೋಟಿ, ಸಂಜಯ್‌ ಪಾಟೀಲ್, ಮಾರುತಿ ಪಾಟೀಲ್, ಮಹದೇವ್ ಕಂಗ್ರಾಳ್ಕರ್, ಬಾವುರಾವ್ ಗಡ್ಕರಿ ಸೇರಿದಂತೆ ಸುಳಗಾ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

* ರೈತ ಸಮುದಾಯ ಭವನಕ್ಕೆ ಶಂಕುಸ್ಥಾಪನೆ
ಸುಳಗಾ ಗ್ರಾಮದಲ್ಲಿ ಸುಮಾರು 1 ಕೋಟಿ ರೂಪಾಯಿ ವೆಚ್ಚದಲ್ಲಿ ರೈತ ಸಮುದಾಯ ಭವನ ನಿರ್ಮಾಣಕ್ಕೆ ಸಚಿವರು ಗುದ್ದಲಿ ಪೂಜೆ ನೆರವೇರಿಸಿದರು‌. ಸಮುದಾಯ ಭವನ ನಿರ್ಮಾಣದಿಂದ ರೈತರಿಗೆ, ಮಹಿಳಾ ಮಂಡಳಿಗೆ ಸಭೆ ಮಾಡಲು ಅನುಕೂಲವಾಗಲಿದೆ ಎಂದು ಸಚಿವರು ಹೇಳಿದರು.
ಕಾಮಗಾರಿ ಸ್ಥಳೀಯರ ಸಲಹೆಯಂತೆ ನಡೆಯಬೇಕು. ಅತ್ಯಂತ ಸುಂದರ ಭವನ ನಿರ್ಮಾಣವಾಗಬೇಕು. ಇದು ಬೇರೆ ಕಡೆ ಮಾಡುವುದಕ್ಕೆ ಮಾದರಿಯಾಗಬೇಕು ಎಂದು ಸಚಿವರು ಗುತ್ತಿಗೆದಾರರಿಗೆ ಸೂಚಿಸಿದರು.

ವೇದಿಕೆಯಲ್ಲೇ ಗಳಗಳ ಅತ್ತ ವ್ಯಕ್ತಿ

ಸುಳಗಾದಲ್ಲಿ ಕಾರ್ಯಕ್ರಮ ನಡೆಯುತ್ತಿರುವ ಸಂದರ್ಭದಲ್ಲಿ ವೇದಿಕೆಗೆ ಬಂದ ವ್ಯಕ್ತಿಯೋರ್ವ ಸಚಿವರ ನೆರವು ನೆನಪಿಸಿಕೊಂಡು, ನಿಮ್ಮ ಋಣವನ್ನು ತೀರಿಸಲು ನನ್ನಿಂದ ಸಾಧ್ಯವಿಲ್ಲ ಎನ್ನುತ್ತ ಗಳಗಳನೆ ಅತ್ತುಬಿಟ್ಟ. ಬೊಮ್ಮಣ್ಣ ಪೋಟೆ ಎನ್ನುವ ವ್ಯಕ್ತಿ ವೇದಿಕೆಗೆ ಬಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಕೆಲಸಗಳು ಎಲ್ಲರಿಗೂ ಆದರ್ಶ. ನನ್ನ ಸಹೋದರಿಗೆ ಹೃದಯದ ಕಾಯಿಲೆ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಿಸಿ, ಶಸ್ತ್ರ ಚಿಕಿತ್ಸೆ ಮಾಡಿಸಲು ನೆರವಾದರು. ನಂತರ ಸಹೋದರಿಯ ಮಗಳಿಗೆ ಉತ್ತಮವಾಗ ಉದ್ಯೋಗ ಒದಗಿಸಿಕೊಟ್ಟು ಜೀವನಕ್ಕೆ ದಾರಿ ಮಾಡಿಕೊಟ್ಟರು. ನಮ್ಮ ಎಲ್ಲ ಕಷ್ಟದ ಸಂದರ್ಭದಲ್ಲೂ ಸಚಿವರು ನೆರವಿಗೆ ನಿಂತರು. ಇದು ನನಗೊಬ್ಬನಿಗೇ ಅಲ್ಲ, ಇಡೀ ಕ್ಷೇತ್ರದ ಜನರಿಗೆ ಅವರು ಕಷ್ಟದ ಸಂದರ್ಭದಲ್ಲಿ ನೆರವಾಗುತ್ತಿದ್ದಾರೆ. ಅವರ ಋಣವನ್ನು ಎಂದಿಗೂ ನನ್ನಿಂದ ತೀರಿಸಲು ಸಾಧ್ಯವಿಲ್ಲ. ಜೀವನ ಪರ್ಯಂತ ನಾನು ನಿಮ್ಮ ಸೇವಕನಾಗಿರಲು ಸಿದ್ಧ ಎನ್ನುತ್ತ ಜೋರಾಗಿ ಅತ್ತುಬಿಟ್ಟ.

ವರದಿ : ಪ್ರತೀಕ ಚಿಟಗಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!