ಬೆಂಗಳೂರು : ಸೋಲನ್ನು ಸವಾಲಾಗಿ ಸ್ವೀಕರಿಸಿ ಮತ್ತೆ ಆಡಳಿತ ಮಾಡುವ ಪ್ರತಿಜ್ಞೆ ಸ್ವೀಕರಿಸುವ ಮನಸ್ಸು ನಮ್ಮದಾಗಲಿ ಎಂದು ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಕರೆ ನೀಡಿದರು.
‘ಸಿಟಿಜನ್ ಫಾರ್ ಸೋಶಿಯಲ್ ಜಸ್ಟೀಸ್ – ಬೆಂಗಳೂರು’ ಇವರ ನೇತೃತ್ವದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣದಲ್ಲಿ ಇಂದು ನಡೆದ “ಎಸ್‍ಸಿ, ಎಸ್‍ಟಿ ಮೀಸಲು ಹಣ ಮುಳುಗಿಸುತ್ತಿರುವ ರಾಜ್ಯ ಸರ್ಕಾರ” ಎಂಬ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಸ್‍ಸಿ, ಎಸ್‍ಟಿ ಮೀಸಲು ಮೊತ್ತದಿಂದ 11,144 ಕೋಟಿ ರೂ. ದುರುಪಯೋಗ ವಿರುದ್ಧ ಎಲ್ಲ ಜಿಲ್ಲೆಗಳಲ್ಲಿ ಹೋರಾಟ ಪ್ರಾರಂಭಿಸಿ ಎಂದು ಮನವಿ ಮಾಡಿದರು. ಹಣ ವಾಪಸ್ ಕೊಡುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಡೋಂಗಿ ಮಾತು, ಸುಳ್ಳು ಭರವಸೆ ಮೂಲಕ ಮೋಸ ಮಾಡಲು ಸಿದ್ದರಾಮಯ್ಯರವರು ಮುಂದಾಗಿದ್ದಾರೆ. ಎಸ್‍ಸಿ ಎಸ್‍ಟಿ ಜನಾಂಗದ ಶಿಕ್ಷಣ, ಆರೋಗ್ಯ, ಕಲ್ಯಾಣಕ್ಕಾಗಿ ಈ ಹಣವನ್ನು ಬಳಸಬೇಕಿದೆ.
ಸರಕಾರದ ಮನಸ್ಸಿಗೆ ಬಂದಂತೆ ಬಳಸಲು ಅಲ್ಲ ಎಂದು ಅವರು ಆಕ್ಷೇಪಿಸಿದರು. ಈ ಜನಾಂಗದಲ್ಲಿ ಹುಟ್ಟಿದ ಮಲ್ಲಿಕಾರ್ಜುನ ಖರ್ಗೆಯವರು ಇದನ್ನು ಸಹಿಸಿಕೊಂಡದ್ದು ಹೇಗೆ ಎಂದು ಅವರು ಪ್ರಶ್ನಿಸಿದರು.