Join The Telegram | Join The WhatsApp |
ಬೆಳಗಾವಿ: ಸಾಂಕ್ರಾಮಿಕ ರೋಗದಿಂದಾಗಿ ಬೆಳಗಾವಿಯಲ್ಲಿ ಅಪಾರ ಸಂಖ್ಯೆಯಲ್ಲಿ ಜಾನುವಾರುಗಳು ಸಾವಿಗೀಡಾಗುತ್ತಿದ್ದು, ರೈತರು ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದ್ದಾರೆ. ಜಿಲ್ಲಾಧಿಕಾರಿಗಳು ಹಾಗೂ ರಾಜ್ಯ ಸರಕಾರ ತಕ್ಷಣ ಮಧ್ಯಪ್ರವೇಶಿಸಿ ರೈತರ ನೆರವಿಗೆ ಧಾವಿಸಬೇಕು ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಆಗ್ರಹಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಬೆಳಗಾವಿ ಗ್ರಾಮೀಣ ಕ್ಷೇತ್ರವೊಂದರಲ್ಲೇ 50ಕ್ಕೂ ಹೆಚ್ಚು ಜಾನುವಾರುಗಳು ಸಾವಿಗೀಡಾಗಿವೆ. ರೋಗ ಎಲ್ಲೆಡೆ ಉಲ್ಬಣವಾಗುತ್ತಿದೆ. ಕೊರೋನಾ, ಪ್ರವಾಹ, ಜಾನುವಾರ ಸಂತೆ ನಿಷೇಧ ಮೊದಲಾದ ಕಾರಣಗಳಿಂದಾಗಿ ಮೊದಲೇ ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ರೈತರು ಇನ್ನಷ್ಟು ಸಂಕಷ್ಟಕ್ಕೊಳಗಾಗುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ತಕ್ಷಣ ಈ ಸಂಬಂಧ ಚರ್ಚೆಗೆ ವಿಶೇಷ ಸಭೆ ಕರೆಯಬೇಕು ಎಂದು ಒತ್ತಾಯಿಸಿದ್ದಾರೆ.
ಜಾನುವಾರುಗಳಿಗೆ ಬಂದಿರುವ ರೋಗಕ್ಕೆ ಸೂಕ್ತವಾದ ಚಿಕಿತ್ಸೆಯೇ ಇಲ್ಲ. ಕುರಿ, ಆಡುಗಳಿಗೆ ನೀಡಲಾಗುವ ವ್ಯಾಕ್ಸಿನ್ ನೀಡಲಾಗುತ್ತಿದೆ. ಇದು ಪರಿಣಾಮಕಾರಿಯಲ್ಲ. ಅದರಲ್ಲೂ ಮೊದಲೇ ವೈರಸ್ ಅವುಗಳ ದೇಹ ಪ್ರವೇಶಿಸಿದ್ದರೆ ಏನೇನೂ ಪ್ರಯೋಜನವಾಗುವುದಿಲ್ಲ. ಜಿಲ್ಲೆಯಲ್ಲಿ ವೆಟರ್ನರಿ ವೈದರೂ ಸಾಕಷ್ಟು ಸಂಖ್ಯೆಯಲ್ಲಿ ಇಲ್ಲ. ಹೆಚ್ಚಿನ ವೈದ್ಯರನ್ನು ಜಿಲ್ಲೆಗೆ ಕರೆಸಲು ಕ್ರಮ ಕೈಗೊಳ್ಳಬೇಕು. ಜಿಲ್ಲಾಧಿಕಾರಿಗಳು ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಲಕ್ಷ್ಮೀ ಹೆಬ್ಬಾಳಕರ್ ಆಗ್ರಹಿಸಿದ್ದಾರೆ.
ಜಾನುವಾರುಗಳು ಸತ್ತರೆ ಅದಕ್ಕೆ ಪರಿಹಾರ ನೀಡಲೂ ನಿಯಮಾವಳಿಯಲ್ಲಿ ಅವಕಾಶವಿಲ್ಲ. ಈ ಹಿಂದೆ 2018 -19 ಮತ್ತು 2019 -20ರಲ್ಲಿ ಜಾನುವಾರುಗಳು ಸತ್ತರೆ 10 ಸಾವಿರ ರೂ. ನೀಡಬೇಕೆಂದು ಬಜೆಟ್ ಅಲೋಕೇಶನ್ ಮಾಡಲಾಗಿತ್ತು. ಆದರೆ ನಂತರ ಅಂತಹ ಅವಕಾಶವೇ ಇಲ್ಲ. ಎಲ್ಲ ರೈತರೂ ಜಾನುವಾರುಗಳಿಗೆ ವಿಮೆ ಮಾಡಿಸಲು ಸಾಧ್ಯವಿಲ್ಲ. ಅದಕ್ಕೂ ನೂರೆಂಟು ಸಮಸ್ಯೆಗಳಿವೆ. ಇದೊಂದು ಗಂಭೀರ ಸಮಸ್ಯೆಯಾಗಿರುವುದರಿಂದ ಈ ಎಲ್ಲ ವಿಷಯಗಳನ್ನು ಚರ್ಚಿಸಲು ವಿಶೇಷ ಸಭೆ ಕರೆಯಬೇಕು. ರಾಜ್ಯ ಸರಕಾರ ತಕ್ಷಣ ರೈತರ ನೆರವಿಗೆ ಬರಬೇಕು ಎಂದು ಅವರು ಒತ್ತಾಯಿಸಿದ್ದಾರೆ.
Join The Telegram | Join The WhatsApp |