ಜೋಧ್‌ಪುರ: ಭ್ರಷ್ಟಾಚಾರದ ವಿಚಾರವಾಗಿ ಅಶೋಕ್ ಗೆಹ್ಲೋಟ್ ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದು, ‘ಪೇಪರ್ ಲೀಕ್ ಮಾಫಿಯಾ’ ರಾಜಸ್ಥಾನದಲ್ಲಿ ಲಕ್ಷಾಂತರ ಯುವಕರ ಭವಿಷ್ಯವನ್ನು ಹಾಳು ಮಾಡಿದೆ ಮತ್ತು ಅವರು ನ್ಯಾಯಕ್ಕಾಗಿ ಒತ್ತಾಯಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಜೋಧ್‌ಪುರದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ‘ಕೆಂಪು ಡೈರಿ’ಯನ್ನು ಉಲ್ಲೇಖಿಸಿ, ಅದರಲ್ಲಿ “ಕಾಂಗ್ರೆಸ್‌ನ ಪ್ರತಿಯೊಂದು ಕರಾಳ ಭ್ರಷ್ಟಾಚಾರ” ಇದೆ ಮತ್ತು ಅದನ್ನು ಬಹಿರಂಗಪಡಿಸಲು ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ರಚಿಸಬೇಕಾಗುತ್ತದೆ ಎಂದು ಹೇಳಿದರು.
ರಾಜಸ್ಥಾನದ ವಜಾಗೊಂಡ ಸಚಿವ ರಾಜೇಂದ್ರ ಗುಧಾ ಅವರ ಬಳಿಯಿರುವ ಕೆಂಪು ಡೈರಿಯನ್ನು ಉಲ್ಲೇಖಿಸಿದ ಅವರು, ಅದರಲ್ಲಿ ಮುಖ್ಯಮಂತ್ರಿಯ ಹಣಕಾಸು ವ್ಯವಹಾರಗಳು ದಾಖಲಾಗಿವೆ ಎಂದು ಹೇಳಿದ್ದರು.
ಕಾಂಗ್ರೆಸ್‌ಗೆ ರೈತರ ಅಥವಾ ಸೈನಿಕರ ಬಗ್ಗೆ ಕಾಳಜಿ ಇಲ್ಲ. ಅವರಿಗೆ ಕುರ್ಚಿ ಬಿಟ್ಟರೆ ಬೇರೇನೂ ಕಾಣಿಸುವುದಿಲ್ಲ. ಜನರ ಹಿತಾಸಕ್ತಿಗಿಂತ ಕಾಂಗ್ರೆಸ್ ತನ್ನ ವೋಟ್ ಬ್ಯಾಂಕ್ ಅನ್ನು ಹೆಚ್ಚು ಪ್ರೀತಿಸುತ್ತಿದೆ ಎಂದರು.
ಬಿಜೆಪಿಯು ರಾಜಸ್ಥಾನವನ್ನು ಪ್ರವಾಸೋದ್ಯಮದಲ್ಲಿ ನಂಬರ್ ಒನ್ ರಾಜ್ಯವನ್ನಾಗಿ ಮಾಡುವ ಗುರಿಯನ್ನು ಹೊಂದಿದೆ ಮತ್ತು ಸರ್ಕಾರ ರಚನೆಯ ನಂತರ ರಾಜ್ಯದ ಮೂಲೆ ಮೂಲೆಗೆ ಅಭಿವೃದ್ಧಿಯನ್ನು ಕೊಂಡೊಯ್ಯುತ್ತದೆ ಎಂದು ಅವರು ಹೇಳಿದರು. ಈ ವರ್ಷದ ಕೊನೆಯಲ್ಲಿ ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.