ನವದೆಹಲಿ:ಆದಾಯ ತೆರಿಗೆ ಸಲ್ಲಿಕೆಯ 2025-26ರ ಮೌಲ್ಯಮಾಪನ ವರ್ಷದಲ್ಲಿ 100 ಕೋಟಿ ರೂಪಾಯಿಗಿಂತ ಹೆಚ್ಚಿನ ಒಟ್ಟು ಆದಾಯವನ್ನು ವರದಿ ಮಾಡಿದ ವ್ಯಕ್ತಿಗಳ ಸಂಖ್ಯೆ 500ರ ಗಡಿ ದಾಟಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡಾ 39 ರಷ್ಟು ಏರಿಕೆ ಕಂಡಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಲೋಕಸಭೆಗೆ ಸಲ್ಲಿಸಿದ ಲಿಖಿತ ಉತ್ತರದಲ್ಲಿ ತಿಳಿಸಿದೆ.
2021-22ರ ಮೌಲ್ಯಮಾಪನ ವರ್ಷದಲ್ಲಿ 142 ರಷ್ಟಿದ್ದ ಇಂತಹ ಶತಕೋಟ್ಯಧಿಪತಿಗಳ ಸಂಖ್ಯೆ ಕಳೆದ ನಾಲ್ಕು ವರ್ಷಗಳಲ್ಲಿ ನಾಲ್ಕು ಪಟ್ಟು ಹೆಚ್ಚಾಗಿ 576ಕ್ಕೆ ಏರಿಕೆಯಾಗಿದೆ.
ಕಾಂಗ್ರೆಸ್ ಸಂಸದ ಮುರಾರಿ ಲಾಲ್ ಮೀನಾ ಅವರ ಪ್ರಶ್ನೆಗೆ ಉತ್ತರಿಸಿದ ರಾಜ್ಯ ಹಣಕಾಸು ಸಚಿವ ಪಂಕಜ್ ಚೌಧರಿ, ಆದಾಯ ತೆರಿಗೆ ಕಾಯ್ದೆಯಡಿ 'ಕೋಟ್ಯಧಿಪತಿ' ಅಥವಾ 'ಬಿಲಿಯನೇರ್' ಎಂಬ ಪದಕ್ಕೆ ನಿರ್ದಿಷ್ಟ ಶಾಸನಬದ್ಧ ವ್ಯಾಖ್ಯಾನವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ, ದೇಶದಲ್ಲಿ ಆದಾಯ ಮತ್ತು ಸಂಪತ್ತಿನ ಅಸಮಾನತೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ತೆರಿಗೆದಾರರ ಒಟ್ಟು ಸಂಪತ್ತಿನ ಡೇಟಾವನ್ನು ಸರ್ಕಾರ ನಿರ್ವಹಿಸುವುದಿಲ್ಲ ಎಂದಿದ್ದಾರೆ.
ಆದಾಗ್ಯೂ, 2023-24ರ ಗೃಹ ಬಳಕೆಯ ವೆಚ್ಚ ಸಮೀಕ್ಷೆಯ ಪ್ರಕಾರ ಗ್ರಾಮೀಣ ಮತ್ತು ನಗರ ಪ್ರದೇಶಗಳ 'ಜಿನಿ ಗುಣಾಂಕ' (ಅಸಮಾನತೆಯ ಅಳತೆಗೋಲು) ಕ್ರಮವಾಗಿ 0.237 ಮತ್ತು 0.284ಕ್ಕೆ ಕುಸಿದಿದ್ದು, ಇದು ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವಿನ ಅಂತರ ಕಡಿಮೆಯಾಗುತ್ತಿರುವುದನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ.
ಕೋವಿಡ್ ಸಾಂಕ್ರಾಮಿಕದ ನಂತರ ಉದ್ಯೋಗ ಮಾರುಕಟ್ಟೆ ಚೇತರಿಸಿಕೊಂಡಿದ್ದು, ನಿರುದ್ಯೋಗ ದರವು ಶೇಕಡಾ 3.1ಕ್ಕೆ ಇಳಿಕೆಯಾಗಿದೆ. ಪ್ರಗತಿಪರ ತೆರಿಗೆ ವ್ಯವಸ್ಥೆ ಹಾಗೂ ಶಿಕ್ಷಣ, ಆರೋಗ್ಯ, ವಸತಿ ಯೋಜನೆಗಳಿಗೆ ಸರ್ಕಾರ ಹೆಚ್ಚಿನ ವೆಚ್ಚ ಮಾಡುತ್ತಿರುವುದು ಅಸಮಾನತೆ ತಗ್ಗಿಸಲು ನೆರವಾಗಿದೆ ಎಂದು ಸಚಿವಾಲಯ ತಿಳಿಸಿದೆ.


