ಬೆಂಗಳೂರು: ಕರ್ನಾಟಕದ ವಿವಿಧ ಭಾಗಗಳಲ್ಲಿ ಜುಲೈ ಮೊದಲ ವಾರದಿಂದಲೇ ಮಳೆ ಚುರುಕುಗೊಂಡಿದ್ದು, ಜಲಾಶಯಗಳಿಗೆ ಹರಿದುಬರುತ್ತಿರುವ ಒಳಹರಿವಿನ ಪ್ರಮಾಣದಲ್ಲೂ ಗಣನೀಯ ಏರಿಕೆ ಕಂಡುಬಂದಿದೆ. ಆದರೆ, ಈ ಸಮಾಧಾನಕರ ಸುದ್ದಿಯ ನಡುವೆಯೂ ರಾಜ್ಯದ ಮಳೆ ಹಂಚಿಕೆಯಲ್ಲಿ ಭಾರಿ ವ್ಯತ್ಯಾಸವಿರುವುದು ಪತ್ತೆಯಾಗಿದೆ.
ಜುಲೈ 6ರ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ರಾಜ್ಯದ 17 ಜಿಲ್ಲೆಗಳು ಹಾಗೂ 129 ತಾಲ್ಲೂಕುಗಳು ಇಂದಿಗೂ ಮಳೆ ಕೊರತೆಯನ್ನು ಎದುರಿಸುತ್ತಿವೆ.
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ (KSNDMC) ಸೋಮವಾರ ಬಿಡುಗಡೆ ಮಾಡಿರುವ ಕಳೆದ ಐದು ವಾರಗಳ ಮಳೆ ವರದಿಯ ಪ್ರಕಾರ, ವಿಜಯನಗರ ಜಿಲ್ಲೆಯಲ್ಲಿ ಅತ್ಯಂತ ತೀವ್ರವಾದ ಮಳೆ ಕೊರತೆ ದಾಖಲಾಗಿದೆ.
ಈ ಜಿಲ್ಲೆಯಲ್ಲಿ ಈವರೆಗೆ ಕೇವಲ 37 ಮಿ.ಮೀ ಮಳೆಯಾಗಿದ್ದು, ಶೇ 61ರಷ್ಟು ಕೊರತೆ ಉಂಟಾಗಿದೆ.
ಆದಾಗ್ಯೂ, ಕಳೆದ ವಾರಕ್ಕೆ ಹೋಲಿಸಿದರೆ ಸಾಮಾನ್ಯ ಮಳೆ ಪಡೆದ ಜಿಲ್ಲೆಗಳ ಸಂಖ್ಯೆ ಹೆಚ್ಚಾಗಿದ್ದು, ಪ್ರಸ್ತುತ 13 ಜಿಲ್ಲೆಗಳಲ್ಲಿ ಪರಿಸ್ಥಿತಿ ಯಥಾಸ್ಥಿತಿಗೆ ಮರಳಿದೆ.
ತಾಲ್ಲೂಕುಗಳ ಸ್ಥಿಗತಿ: ಕೇವಲ 5 ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಅತ್ಯಂತ ಹೆಚ್ಚು ಹಾಗೂ 25 ತಾಲ್ಲೂಕುಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗಿದೆ.
70 ತಾಲ್ಲೂಕುಗಳು ಸಾಮಾನ್ಯ ಮಳೆಯನ್ನು ಕಂಡಿದ್ದರೆ, 129 ತಾಲ್ಲೂಕುಗಳಲ್ಲಿ ಕೊರತೆ ಹಾಗೂ 11 ತಾಲ್ಲೂಕುಗಳಲ್ಲಿ ತೀವ್ರ ಮಳೆ ಕೊರತೆ ಸೃಷ್ಟಿಯಾಗಿದೆ.
ಹೋಬಳಿಗಳ ಸ್ಥಿಗತಿ: ರಾಜ್ಯದ 38 ಹೋಬಳಿಗಳಲ್ಲಿ ಅತಿ ಹೆಚ್ಚು ಹಾಗೂ 91 ಹೋಬಳಿಗಳಲ್ಲಿ ಹೆಚ್ಚು ಮಳೆಯಾಗಿದೆ. ಇನ್ನು 220 ಹೋಬಳಿಗಳಲ್ಲಿ ಸಾಮಾನ್ಯ ಮಳೆಯಾಗಿದ್ದರೆ, 403 ಹೋಬಳಿಗಳಲ್ಲಿ ಮಳೆ ಕೊರತೆ ಮತ್ತು 89 ಹೋಬಳಿಗಳಲ್ಲಿ ಭಾರಿ ಪ್ರಮಾಣದ ಮಳೆ ಕೊರತೆ ಕಂಡುಬಂದಿದೆ.


