ಬೆಂಗಳೂರು: ತಮ್ಮ ಹಾಗೂ ತಮ್ಮ ಕುಟುಂಬಸ್ಥರಿಗೆ ಸೇರಿದ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯ (ED) ನಡೆಸಿರುವ ದಾಳಿಯ ಕುರಿತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು, ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆ ಹಾಗೂ ದಾಳಿಯ ಹಿಂದಿನ ರಾಜಕೀಯ ಉದ್ದೇಶಗಳ ಕುರಿತು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
"2,000 ಕೋಟಿ ಟರ್ನೋವರ್ ಸಂಸ್ಥೆಗೆ 2 ಕೋಟಿ ದೊಡ್ಡ ಮೊತ್ತವಲ್ಲ"
ದಾಳಿಯಲ್ಲಿ ಸಿಕ್ಕಿದೆ ಎನ್ನಲಾದ ಹಣದ ಕುರಿತು ಸ್ಪಷ್ಟನೆ ನೀಡಿದ ಸಚಿವರು, "ನಮ್ಮ ಸಂಸ್ಥೆಗಳ ವಾರ್ಷಿಕ ವಹಿವಾಟು (Turnover) 2,000 ಕೋಟಿ ರೂಪಾಯಿಗೂ ಅಧಿಕವಾಗಿದೆ.
ಹೀಗಿರುವಾಗ ದಾಳಿಯಲ್ಲಿ ಸಿಕ್ಕಿದೆ ಎನ್ನಲಾದ 2 ಕೋಟಿ ರೂಪಾಯಿ ನಮಗೆ ದೊಡ್ಡ ಮೊತ್ತವೇ ಅಲ್ಲ. ಆ 2 ಕೋಟಿ ರೂಪಾಯಿ ಹಣ ಸಂಪೂರ್ಣವಾಗಿ ನಮ್ಮದೇ ಆಗಿದ್ದು, ಅದನ್ನು ಕಾನೂನುಬದ್ಧವಾಗಿ ಕ್ಲೈಮ್ ಮಾಡುತ್ತೇವೆ" ಎಂದು ಸ್ಪಷ್ಟಪಡಿಸಿದರು.
ಆಫ್ರಿಕಾ ಮೈನಿಂಗ್ ಹೂಡಿಕೆ ಹಾಗೂ ದಾಖಲೆ ಸಲ್ಲಿಕೆ: ದಾಳಿಗೆ ಕಾರಣ ಎನ್ನಲಾದ ವಿದೇಶಿ ಹೂಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, "ಆಫ್ರಿಕಾದಲ್ಲಿ ಮೈನಿಂಗ್ ಮತ್ತು ಟ್ರೇಡಿಂಗ್ ಕಂಪನಿ ಆರಂಭಿಸಲು ಯೋಜನೆ ರೂಪಿಸಿದ್ದೆವು. ಹೂಡಿಕೆ ಇನ್ನೂ ಪೂರ್ಣಗೊಂಡಿಲ್ಲ,
ಪ್ರಕ್ರಿಯೆಯ ಹಂತದಲ್ಲಿದೆ. ಮಗ ಮತ್ತು ಮಗಳ ಹೆಸರಿನಲ್ಲಿ ಕಂಪನಿ ಮಾಡಿರುವುದು ನಿಜ. ಈ ಸಂಬಂಧ ಆದಾಯ ತೆರಿಗೆ (IT) ಇಲಾಖೆಗೆ ಈಗಾಗಲೇ ಎಲ್ಲಾ ದಾಖಲೆಗಳನ್ನು ಒದಗಿಸಿದ್ದೇವೆ. ಇಡಿ ಕೇಳಿದಾಗಲೂ ಅಗತ್ಯ ದಾಖಲೆಗಳನ್ನು ಸಲ್ಲಿಕೆ ಮಾಡುತ್ತೇವೆ" ಎಂದು ವಿವರಿಸಿದರು.


