ನವದೆಹಲಿ: ಮಕ್ಕಳು ತಮ್ಮ ಕಲ್ಪನಾಶಕ್ತಿಗೆ ಹೆಸರುವಾಸಿಯಾಗಿದ್ದಾರೆ. ಆದರೆ ಕೆಲವರು ಆ ಕಲ್ಪನೆಯನ್ನು ಬಳಸಿಕೊಂಡು ದೊಡ್ಡವರೂ ಗಮನಿಸದ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುತ್ತಾರೆ.
ಇದೇ ಸಾಲಿಗೆ ಸೇರಿದ 11 ವರ್ಷದ ಅಥ್ವಿಕ್ ಅಮಿತ್ ಕುಮಾರ್, ಸಾಮಾನ್ಯ ಪೇಪರ್ ಬಿಸಿನೆಸ್ ಕಾರ್ಡ್‌ಗಳಿಗೆ ಡಿಜಿಟಲ್ ಪರ್ಯಾಯವನ್ನು ಪರಿಚಯಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಅಥ್ವಿಕ್ ಸ್ಥಾಪಿಸಿರುವ ZOZO Connect ಸ್ಟಾರ್ಟ್‌ಅಪ್ ಸುಮಾರು ₹25 ಕೋಟಿ ಮೌಲ್ಯವನ್ನು ಹೊಂದಿದೆ ಎಂಬ ವರದಿಗಳು ಹೊರಬಿದ್ದಿದ್ದು, ಈ ಮೌಲ್ಯಮಾಪನವನ್ನು ಸ್ವತಂತ್ರವಾಗಿ ದೃಢೀಕರಿಸಲಾಗಿಲ್ಲ. ಆದರೂ, ದಿನನಿತ್ಯದ ಒಂದು ಸಾಮಾನ್ಯ ಸಮಸ್ಯೆಯನ್ನು ಗಮನಿಸಿ ಅದಕ್ಕೆ ತಂತ್ರಜ್ಞಾನ ಆಧಾರಿತ ಪರಿಹಾರ ಕಂಡುಕೊಂಡಿರುವ ಅವರ ಪ್ರಯಾಣ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಸಾಮಾನ್ಯ ಸಮಸ್ಯೆಯಿಂದ ಹುಟ್ಟಿದ ವಿಭಿನ್ನ ಆಲೋಚನೆ
ಈ ಸ್ಟಾರ್ಟ್‌ಅಪ್‌ನ ಆಲೋಚನೆ ಎಲ್ಲರೂ ಬಳಸುವ ಪೇಪರ್ ಬಿಸಿನೆಸ್ ಕಾರ್ಡ್‌ಗಳಿಂದಲೇ ಆರಂಭವಾಯಿತು. ಸಾಂಪ್ರದಾಯಿಕ ಬಿಸಿನೆಸ್ ಕಾರ್ಡ್‌ಗಳಲ್ಲಿ ಸಂಪರ್ಕ ಮಾಹಿತಿ ಬದಲಾಗಿದರೆ ಅವು ನಿರುಪಯುಕ್ತವಾಗುತ್ತವೆ.
ಅನೇಕ ಕಾರ್ಡ್‌ಗಳು ಕಳೆದುಹೋಗುತ್ತವೆ, ಪರ್ಸ್ ಅಥವಾ ಡ್ರಾಯರ್‌ಗಳಲ್ಲಿ ಮರೆತು ಹೋಗುತ್ತವೆ ಅಥವಾ ಸಭೆಗಳ ಬಳಿಕ ತ್ಯಾಜ್ಯವಾಗುತ್ತವೆ.
ಹೊಸ ಮಾಹಿತಿ ಸೇರಿಸಬೇಕಾದರೆ ಮತ್ತೆ ಮುದ್ರಿಸಬೇಕಾಗುತ್ತದೆ. ಇದರಿಂದ ವೆಚ್ಚವೂ ಹೆಚ್ಚುತ್ತದೆ, ಕಾಗದದ ವ್ಯರ್ಥವೂ ಆಗುತ್ತದೆ.
ಈ ಸಮಸ್ಯೆಯನ್ನು ಗಮನಿಸಿದ ಅಥ್ವಿಕ್, NFC ತಂತ್ರಜ್ಞಾನ ಮತ್ತು QR ಕೋಡ್ ಮೂಲಕ ಸಂಪರ್ಕ ವಿವರಗಳನ್ನು ಹಂಚಿಕೊಳ್ಳಬಹುದಾದ ಡಿಜಿಟಲ್ ಬಿಸಿನೆಸ್ ಕಾರ್ಡ್ ವ್ಯವಸ್ಥೆಯನ್ನು ರೂಪಿಸಿದರು.


