ವಿಜಯಪುರ: ವಿಜಯಪುರದ(Vijayapura) ಹೊರವಲಯದಲ್ಲಿರುವ ಐತಿಹಾಸಿಕ ಭೂತನಾಳ ಕೆರೆಯಲ್ಲಿ ಇಬ್ಬರು ಮಕ್ಕಳು ಹಾಗೂ ನಾಲ್ವರು ಮಹಿಳೆಯರು ಸೇರಿ ಒಂದೇ ಕುಟುಂಬದ ಆರು ಜನರ ಮೃತದೇಹಗಳು(Dead body) ತೇಲುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ.
ಕೆರೆಯಲ್ಲಿ ಶವಗಳನ್ನು ಕಂಡ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಡಿವೈಎಸ್ಪಿ ನಾಗರಾಜ್, ಆದರ್ಶ ನಗರ ಪಿಎಸ್‌ಐ ಸೀತಾರಾಮ ಲಮಾಣಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಶವಗಳನ್ನು ಹೊರತೆಗೆದಿದ್ದಾರೆ.
ಆಗಸ್ಟ್ 24ರಿಂದ ಕಾಣೆಯಾಗಿದ್ದ ಕುಟುಂಬ!
ಮೃತರನ್ನು ಶೋಭಾ ಜಾಲಗೇರಿ (45) ಹಾಗೂ ಆಕೆಯ ಮಕ್ಕಳಾದ ವಿದ್ಯಾ (16), ಸುವರ್ಣ (14), ಗೌಡೇಶ್ (ಮೂಗ-10), ಸಾನಿಕಾ (7) ಮತ್ತು ವಿಕಾಸ (5) ಎಂದು ಗುರುತಿಸಲಾಗಿದೆ..
ಪ್ರಾಥಮಿಕ ತನಿಖೆಯ ಪ್ರಕಾರ, ಶೋಭಾ ಅವರಿಗೆ ಪತಿ ಮಲಕಾರಿ ಭೀಮರಾಯ ಜಾಲಗೇರಿ ಜೊತೆ ತೀವ್ರ ಕೌಟುಂಬಿಕ ಜಗಳವಾಗಿತ್ತು.
ಗಂಡನೊಂದಿಗೆ ಜಗಳವಾಡಿದ ಬಳಿಕ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಮಕ್ಕಳೊಂದಿಗೆ ಹೊರಬಂದಿದ್ದ ಈ ಕುಟುಂಬವು ಕಳೆದ ಆಗಸ್ಟ್ 24ರಿಂದ ಕಾಣೆಯಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.


