ರಾಯಚೂರು: ಇಲ್ಲಿನ (Raichur) ಮಾನ್ವಿಯ ಅಂದ್ರೂನ್ ಕಿಲ್ಲಾ ಕೋಟೆ ಪ್ರದೇಶದಲ್ಲಿ ಮನೆ ನಿರ್ಮಾಣಕ್ಕಾಗಿ ನೆಲ ಅಗೆಯುತ್ತಿದ್ದ ವೇಳೆ ಸುಮಾರು 700 ವರ್ಷಗಳಷ್ಟು (700 years) ಹಳೆಯದೆಂದು ಅಂದಾಜಿಸಲಾದ ತಾಮ್ರದ ನಾಣ್ಯಗಳ ನಿಧಿ (treasure) ಪತ್ತೆಯಾಗಿದೆ.
ಮಣ್ಣಿನ ಗಡಿಗೆಯಲ್ಲಿ ಸಂಗ್ರಹಿಸಲಾಗಿದ್ದ ಸುಮಾರು ಒಂದೂವರೆ ಕೆಜಿ ತೂಕದ 360 ನಾಣ್ಯಗಳು ಕಾರ್ಮಿಕರ ಕೈಗೆ ಸಿಕ್ಕಿದ್ದು, ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ.
ವಿಜಯನಗರ ಅರಸರ ಕಾಲಕ್ಕೆ ಸಂಬಂಧಿಸಿದ ಕೋಟೆ ಪ್ರದೇಶದಲ್ಲಿ ಈ ನಾಣ್ಯಗಳು ದೊರೆತಿವೆ. ನಾಣ್ಯಗಳ ಮೇಲೆ ಉರ್ದು, ಪರ್ಷಿಯನ್ ಮತ್ತು ಅರೇಬಿಕ್ ಭಾಷೆಯ ಬರಹಗಳು ಕಂಡುಬಂದಿದ್ದು, ಪ್ರಾಥಮಿಕ ಮಾಹಿತಿಯಂತೆ ಇವು ಬಹಮನಿ ಸುಲ್ತಾನರ ಆಳ್ವಿಕೆಯ ಅವಧಿಯಲ್ಲಿ ಚಲಾವಣೆಯಲ್ಲಿದ್ದ ನಾಣ್ಯಗಳಾಗಿರಬಹುದು ಎಂದು ಹೇಳಲಾಗುತ್ತಿದೆ.
ಶೈಜಾದಿ ಎಂಬುವವರ ಮನೆ ಬುನಾದಿ ನಿರ್ಮಾಣಕ್ಕೆ ಮಣ್ಣು ಸಂಗ್ರಹಿಸುವ ಉದ್ದೇಶದಿಂದ ಕೋಟೆ ಪ್ರದೇಶದಲ್ಲಿ ನೆಲ ಅಗೆಯಲಾಗುತ್ತಿತ್ತು.
ಈ ವೇಳೆ ಹುಸೇನ್ ಬಾಷಾ, ಸತ್ತರ್ ಹಾಗೂ ರುಕ್ಮನ್ ಅವರು ಮಣ್ಣಿನೊಳಗೆ ಗಡಿಗೆಯೊಂದನ್ನು ಪತ್ತೆಹಚ್ಚಿದ್ದು, ಪರಿಶೀಲಿಸಿದಾಗ ಅದರೊಳಗೆ ನೂರಾರು ತಾಮ್ರದ ನಾಣ್ಯಗಳು ಇರುವುದು ಬೆಳಕಿಗೆ ಬಂದಿದೆ.
ಈ ವಿಷಯ ತಿಳಿಯುತ್ತಿದ್ದಂತೆ ಮಾನ್ವಿ ಪೊಲೀಸರು ನಾಣ್ಯಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮಾನ್ವಿ ತಹಶೀಲ್ದಾರರೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಾಣ್ಯಗಳ ನಿಖರ ಕಾಲಮಾನ, ಮೂಲ ಹಾಗೂ ಐತಿಹಾಸಿಕ ಮಹತ್ವವನ್ನು ಪುರಾತತ್ವ ತಜ್ಞರ ಪರಿಶೀಲನೆಯ ಬಳಿಕವೇ ಖಚಿತಪಡಿಸಬೇಕಿದೆ.


