ಚೋಕೋ : ಕೊಲಂಬಿಯಾದ ಪಶ್ಚಿಮ ಭಾಗದಲ್ಲಿ ಭೀಕರ ಭೂಕಂಪ ಸಂಭವಿಸಿದ್ದು, ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ.
ರಿಕ್ಟರ್ ಮಾಪಕದಲ್ಲಿ 7.4 ರಷ್ಟು ತೀವ್ರತೆ ದಾಖಲಾಗಿರುವ ಈ ಪ್ರಕೃತಿ ವಿಕೋಪಕ್ಕೆ ಇದುವರೆಗೆ ಕನಿಷ್ಠ 47ಕ್ಕೂ ಹೆಚ್ಚು ಜನರು ಜೀವ ಕಳೆದುಕೊಂಡಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ.ಭೂಕಂಪದ ಧಕ್ಕೆಗೆ ಪ್ರಮುಖ ನಗರಗಳಲ್ಲಿ ಕನಿಷ್ಠ 20ಕ್ಕೂ ಹೆಚ್ಚು ಬೃಹತ್ ಕಟ್ಟಡಗಳು ನೆಲಸಮಗೊಂಡಿವೆ.
ಚೋಕೋ ಪ್ರಾಂತ್ಯದಲ್ಲಿ ಭೂಕಂಪನದ ಕೇಂದ್ರಬಿಂದು: ಕೊಲಂಬಿಯಾದ ಚೋಕೋ ಪ್ರಾಂತ್ಯದ ಸಂಜೋಸ್ ಡೆಲ್ ಪಾಲ್ಮಾರ್ ಬಳಿ ಭೂಮಿಯ ಆಳದಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ. ಭೂಕಂಪನದ ತೀವ್ರತೆ ಎಷ್ಟಿತ್ತೆಂದರೆ ರಾಜಧಾನಿ ಬೋಗೋಟಾ ಮಾತ್ರವಲ್ಲದೆ ನೆರೆರಾಷ್ಟ್ರಗಳಾದ ಇಕ್ವೆಡಾರ್, ವೆನೆಜುವೆಲಾ ಮತ್ತು ಪನಾಮಾಗಳಲ್ಲೂ ಭಾರಿ ಕಂಪನ ಅನುಭವಕ್ಕೆ ಬಂದಿದೆ.
ಪೆರೇರಾದಲ್ಲಿ ಪೆರೇರಾ ತತ್ತರ - ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿದ ಜನರು: ಪೆರೇರಾ ನಗರದಲ್ಲಿ ಭೂಕಂಪನದ ತೀವ್ರತೆಗೆ ಕಟ್ಟಡಗಳು ನೆಲಸಮಗೊಂಡಿದ್ದು, ರಸ್ತೆಗಳ ಉದ್ದಕ್ಕೂ ಕಟ್ಟಡಗಳ ಅವಶೇಷಗಳು ಚಲ್ಲಾಪಿಲ್ಲಿಯಾಗಿ ಬಿದ್ದಿವೆ.
ಭೀತಿಯಿಂದ ಜನರು ಮನೆ, ಆಫೀಸುಗಳಿಂದ ಹೊರಬಂದು ರಸ್ತೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ಪಡೆಗಳು ಹಾಗೂ ತುರ್ತು ಕಾರ್ಯಾಚರಣೆ ತಂಡಗಳು ಯುದ್ಧೋಪಾದಿಯಲ್ಲಿ ಜೆಸಿಬಿ ಹಾಗೂ ಆಧುನಿಕ ಉಪಕರಣ ಬಳಸಿ ಜನರನ್ನು ಹೊರತೆಗೆಯುವ ಕಾರ್ಯದಲ್ಲಿ ತೊಡಗಿವೆ.


