ಹಾಸನ: ತಂದೆ ಹೊಸ ಮೊಬೈಲ್ ಫೋನ್ ಕೊಡಿಸಲಿಲ್ಲ ಎಂಬ ಸಣ್ಣ ಕಾರಣಕ್ಕೆ ಮನನೊಂದ 13 ವರ್ಷದ ಬಾಲಕನೊಬ್ಬ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ಹಾಸನದ ಹೊರವಲಯದಲ್ಲಿರುವ ಯಡಿಯೂರು ಗ್ರಾಮದಲ್ಲಿ ನಡೆದಿದೆ.
ಚಿತ್ರದುರ್ಗದಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಪ್ರೀತಮ್ (13) ದುರಂತಕ್ಕೀಡಾದ ಬಾಲಕ.ಶಾಲೆಗೆ ರಜೆ ಇದ್ದಿದ್ದರಿಂದ ಆತ ಯಡಿಯೂರಿನಲ್ಲಿದ್ದ ಹೆತ್ತವರ ಬಳಿಗೆ ಬಂದಿದ್ದ. ಬಾಲಕನ ಪೋಷಕರು ಯಡಿಯೂರಿನ ಖಾಸಗಿ ಬಡಾವಣೆಯೊಂದರ ನಿರ್ಮಾಣ ಕಾಮಗಾರಿಯಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ಅಲ್ಲೇ ಪಕ್ಕದಲ್ಲಿದ್ದ ತಾತ್ಕಾಲಿಕ ಶೆಡ್‌ನಲ್ಲಿ ವಾಸವಿದ್ದರು.
ಕೆಲ ದಿನಗಳಿಂದ ಪ್ರೀತಮ್ ತನಗೆ ಮೊಬೈಲ್ ಕೊಡಿಸುವಂತೆ ತಂದೆಯ ಬಳಿ ಪಟ್ಟು ಹಿಡಿದಿದ್ದ. ಆದರೆ, ತಂದೆ ಅದಕ್ಕೆ ಒಪ್ಪಿರಲಿಲ್ಲ. ಇದರಿಂದ ಬೇಸರಗೊಂಡಿದ್ದ ಬಾಲಕ, ಶೆಡ್‌ನಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಸೀರೆಯಿಂದ ನೇಣು ಬಿಗಿದುಕೊಂಡಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


