ಮೈಸೂರು: ಇತ್ತೀಚಿನ ದಿನಗಳಲ್ಲಿ ಜಂಕ್ ಫುಡ್ ಹಾಗೂ ಕರಿದ ತಿಂಡಿಗಳನ್ನು ಸೇವಿಸುವುದರಿಂದ ಮಕ್ಕಳ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತಿದೆ.
ಇದರ ಬೆನ್ನಲ್ಲೇ ಮೈಸೂರು ಜಿಲ್ಲೆಯಲ್ಲಿ ಕುರ್ಕುರೆ ಪ್ಯಾಕೆಟ್‌ನಲ್ಲಿದ್ದ ಆಟಿಕೆ ವಸ್ತುವನ್ನು ನುಂಗಿ ಐದು ವರ್ಷದ ಮಗುವೊಂದು ದುರಂತವಾಗಿ ಪ್ರಾಣ ಕಳೆದುಕೊಂಡಿರುವ ಘಟನೆ ವರದಿಯಾಗಿದೆ.
ಜಂಕ್ ಫುಡ್‌ಗಳಲ್ಲಿ ನೀಡಲಾಗುವ ಆಕರ್ಷಕ ಉಡುಗೊರೆಗಳು ಎಷ್ಟರ ಮಟ್ಟಿಗೆ ಮಕ್ಕಳ ಜೀವಕ್ಕೆ ಕಂಟಕವಾಗಬಹುದು ಎಂಬುದಕ್ಕೆ ಈ ದಾರುಣ ಘಟನೆ ಕೈಗನ್ನಡಿಯಾಗಿದೆ.
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಗೌರಿಪುರ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಸಂತೋಷ್ ಹಾಗೂ ಐಶ್ವರ್ಯ ದಂಪತಿಯ ಐದು ವರ್ಷದ ಪುತ್ರ ಮುಕುಂದ ಮಯೂರ್ ಮೃತಪಟ್ಟ ಬಾಲಕ. ಮಗು ಕುರ್ಕುರೆ ತಿಂದ ಬಳಿಕ, ಆ ಪ್ಯಾಕೆಟ್‌ನೊಳಗೆ ಬಂದಿದ್ದ ಸಣ್ಣ ಪ್ಲಾಸ್ಟಿಕ್ ಬಾಲ್ ಒಂದನ್ನು ಆಟವಾಡುತ್ತಾ ಬಾಯಿಗೆ ಹಾಕಿಕೊಂಡು ನುಂಗಿದ್ದಾನೆ. ಈ ವೇಳೆ ಪ್ಲಾಸ್ಟಿಕ್ ಬಾಲ್ ಮಗುವಿನ ಗಂಟಲಿನಲ್ಲಿ ಸಿಲುಕಿಕೊಂಡಿದೆ.


