ಗೋರಖ್ ಪುರ : ಉತ್ತರ ಪ್ರದೇಶದ ಗೋರಖ್ ಪುರ ಜಿಲ್ಲೆಯಲ್ಲಿ ಸಮಾಜವೇ ಬೆಚ್ಚಿಬೀಳುವಂತಹ ಅಮಾನವೀಯ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.
ಕೇವಲ 9 ತಿಂಗಳ ಹೆಣ್ಣು ಶಿಶುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ 12 ವರ್ಷದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಘಟನೆಯು ಸ್ಥಳೀಯರಲ್ಲಿ ತೀವ್ರ ಆಕ್ರೋಶ ಮತ್ತು ಆತಂಕಕ್ಕೆ ಕಾರಣವಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಶುಕ್ರವಾರ ರಾತ್ರಿ ಮಗು ತನ್ನ ತಾಯಿಯ ಪಕ್ಕದಲ್ಲಿ ನಿದ್ರಿಸುತ್ತಿತ್ತು. ಆದರೆ ಮಧ್ಯರಾತ್ರಿ ಸುಮಾರು 2 ಗಂಟೆ ವೇಳೆಗೆ ತಾಯಿ ಎಚ್ಚರಗೊಂಡಾಗ ಮಗು ಕಾಣಿಸದೇ ಇದ್ದುದನ್ನು ಗಮನಿಸಿದರು.
ಇದರಿಂದ ಆತಂಕಗೊಂಡ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಸುತ್ತಮುತ್ತ ಪ್ರದೇಶದಲ್ಲಿ ಹುಡುಕಾಟ ಆರಂಭಿಸಿದರು. ಆದರೆ ರಾತ್ರಿಯಿಡೀ ಯಾವುದೇ ಸುಳಿವು ಲಭಿಸಲಿಲ್ಲ.
ಮುಂದಿನ ದಿನ ಬೆಳಿಗ್ಗೆ ಗ್ರಾಮದ ಕೆಲವರು ಮನೆಯ ಸಮೀಪದ ಹೊಲದಲ್ಲಿದ್ದ ಶೆಡ್ ನಲ್ಲಿ ಮಗು ಪ್ರಜ್ಞಾಹೀನವಾಗಿ ಬಿದ್ದಿರುವುದನ್ನು ಕಂಡರು. ಮಗುವಿನ ದೇಹದ ಮೇಲೆ ಗಾಯಗಳ ಗುರುತುಗಳಿದ್ದುದನ್ನು ಗಮನಿಸಿದ ಅವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಬಂದ ಪೊಲೀಸರು ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ವ್ಯವಸ್ಥೆ ಮಾಡಿದರು.ವೈದ್ಯರು ಮಗುವಿಗೆ ಅಗತ್ಯ ತುರ್ತು ಚಿಕಿತ್ಸೆ ನೀಡಿದ್ದು, ಸದ್ಯ ಮಗುವಿನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಲಭ್ಯವಿದ್ದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದರು.
ತನಿಖೆಯ ವೇಳೆ ಅನುಮಾನಾಸ್ಪದವಾಗಿ ಕಂಡಿದ್ದ ಮಗುವಿನ ಸಂಬಂಧಿಕನಾದ 12 ವರ್ಷದ ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು.
ಪೊಲೀಸರ ಪ್ರಕಾರ, ವಿಚಾರಣೆ ವೇಳೆ ಬಾಲಕನು ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದು, ಅಶ್ಲೀಲ ವಿಡಿಯೋಗಳ ವೀಕ್ಷಣೆಯಿಂದ ಪ್ರಭಾವಿತನಾಗಿ ಈ ಕೃತ್ಯ ಎಸಗಿರುವುದಾಗಿ ಹೇಳಿದ್ದಾನೆ ಎನ್ನಲಾಗಿದೆ.
ಈ ಪ್ರಕರಣವನ್ನು ಗೋರಖ್ಪುರ ನಗರ ಪೊಲೀಸ್ ಅಧಿಕಾರಿಗಳು ದೃಢಪಡಿಸಿದ್ದು, ಆರೋಪಿಯ ವಿರುದ್ಧ ಅನ್ವಯವಾಗುವ ಕಾನೂನು ವಿಧಿಗಳ ಅಡಿಯಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.


