ಕುಷ್ಟಗಿ : ಮುನಿಸಿಕೊಂಡಿರುವ ಮಳೆರಾಯನನ್ನು ಯುವಕನೊಬ್ಬ ತನ್ನ ದೈಹಿಕ ಸಾಮರ್ಥ್ಯವನ್ನೂ ಮೀರಿದ ಅತ್ಯಂತ ಕಠಿಣ ಹರಕೆಯೊಂದನ್ನು ಸಲ್ಲಿಸಿ ಇಡೀ ಗ್ರಾಮದ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
ಕುಷ್ಟಗಿ ತಾಲೂಕಿನ ಕೆ.ಬೋದೂರು ಗ್ರಾಮದ 21 ವರ್ಷದ ಯುವಕ ಭೀಮನಗೌಡ ಪೊಲೀಸ್‌ಪಾಟೀಲ್ ಈ ಸಾಹಸಮಯ ಭಕ್ತಿ ಸಮರ್ಪಣೆ ಮಾಡಿದವರು.
ಕಾರ ಹುಣ್ಣಿಮೆಯ ಪವಿತ್ರ ದಿನದಂದು ಗ್ರಾಮದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಆಯೋಜನೆಗೊಂಡಿದ್ದವು.
ಇದೇ ಸಂದರ್ಭವನ್ನು ಸದುಪಯೋಗಪಡಿಸಿಕೊಂಡ ಭೀಮನಗೌಡ, ಬಿತ್ತನೆ ಮಾಡಿ ಮಳೆಗಾಗಿ ಕಾದು ಕುಳಿತಿರುವ ರೈತರ ಆತಂಕ ದೂರವಾಗಲಿ ಎಂಬ ಸಂಕಲ್ಪ ತೊಟ್ಟರು.
ಬೆಳ್ಳಂಬೆಳಗ್ಗೆಯೇ ಭುಜದ ಮೇಲೆ ಬರೋಬ್ಬರಿ 101 ಕೆಜಿಯ ಸಜ್ಜೆ ಚೀಲವನ್ನು ಹೊತ್ತುಕೊಂಡ ಯುವಕ, ಗ್ರಾಮದ ಪ್ರಮುಖ ದೇವಸ್ಥಾನಗಳತ್ತ ಹೆಜ್ಜೆ ಹಾಕಿದರು.
ಕೇವಲ ನಡಿಗೆಯಷ್ಟೇ ಅಲ್ಲದೆ, ಪ್ರತಿ ಹೆಜ್ಜೆಯಲ್ಲೂ 101 ಕೆಜಿ ಭಾರದೊಂದಿಗೇ ದೀರ್ಘ ದಂಡ ನಮಸ್ಕಾರ ಹಾಕುತ್ತಾ ಸಾಗಿದ ಭೀಮನಗೌಡರ ಭಕ್ತಿಗೆ ಗ್ರಾಮಸ್ಥರು ಮೂಕವಿಸ್ಮಿತರಾದರು. ದೈಹಿಕವಾಗಿ ಅತ್ಯಂತ ದಣಿಸುವ ಹಾಗೂ ಕಠಿಣವಾದ ಈ ಆಚರಣೆಯನ್ನು ಕೇವಲ ಭಕ್ತಿ ಮತ್ತು ರೈತರ ಮೇಲಿನ ಕಾಳಜಿಯಿಂದ ಯಶಸ್ವಿಯಾಗಿ ಪೂರ್ಣಗೊಳಿಸಿದರು.
ಬತ್ತಿದ ಹೊಲಗಳು ಹಸಿರಿನಿಂದ ಕಂಗೊಳಿಸಲಿ, ಜಾನುವಾರುಗಳಿಗೆ ಮೇವು-ನೀರಿನ ಕೊರತೆ ನೀಗಲಿ ಎಂದು ದೇವಸ್ಥಾನಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಪ್ರಸಕ್ತ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಗ್ರಾಮೀಣ ಭಾಗದಲ್ಲಿ ಆತಂಕ ಮನೆ ಮಾಡಿದ್ದು, ಮಳೆಗಾಗಿ ವಿಶೇಷ ಪೂಜೆ, ಭಜನೆ ಹಾಗೂ ಹರಕೆಗಳು ನಿರಂತರವಾಗಿ ನಡೆಯುತ್ತಿವೆ.
ಈ ನಡುವೆ ಭೀಮನಗೌಡ ಸಲ್ಲಿಸಿದ ಈ ವಿಶಿಷ್ಟ ಹರಕೆ ಗ್ರಾಮದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಯುವಕನ ಸಂಕಲ್ಪ ಮತ್ತು ಕಾಳಜಿಯನ್ನು ಹಿರಿಯರು, ಮಹಿಳೆಯರು ಸೇರಿದಂತೆ ಇಡೀ ಗ್ರಾಮಸ್ಥರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.


