ಮಗ ಕಪ್ಪಗಿದ್ದಾನೆ, ಇವನು ನನಗೆ ಹುಟ್ಟಿದವನಲ್ಲ ಎಂಬ ಅಕಾರಣ ಅನುಮಾನದಿಂದ ಪಾಪಿ ತಂದೆಯೊಬ್ಬ ತನ್ನ 11 ವರ್ಷದ ಮಗನನ್ನೇ ಹತ್ಯೆ ಮಾಡಿರುವ ಅಮಾನವೀಯ ಘಟನೆ ಆಂಧ್ರಪ್ರದೇಶದ ಏಲೂರಿನಲ್ಲಿ ನಡೆದಿದೆ.
ಕಳೆದ ಕೆಲವು ವರ್ಷಗಳಿಂದ ಮಗ ಮತ್ತು ಪತ್ನಿಯ ಮೇಲೆ ಸಂಶಯ ಪಟ್ಟು ಕಿರುಕುಳ ನೀಡುತ್ತಿದ್ದ ವಿನೋದ್ ಎಂಬಾತ, ಈಗ ತನ್ನ ಮಗನನ್ನೇ ಹೊಡೆದು ಸಾಯಿಸಿರುವ ಗಂಭೀರ ಆರೋಪ ಕೇಳಿಬಂದಿದೆ.
ಈ ಸಂಬಂಧ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು, ಮಗನ ಮೈಬಣ್ಣದ ಕುರಿತಾದ ವಿಕೃತ ಅನುಮಾನವೇ ಈ ಭೀಕರ ಹತ್ಯೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಆಂಧ್ರಪ್ರದೇಶದ ಏಲೂರಿನ ನಾಯುಡುಗುಡೆಂ ನಿವಾಸಿ ವಿನೋದ್ ಎಂಬಾತನಿಗೆ 11 ವರ್ಷದ ಮಗ ರಿಷಿಬಾಬು ಇದ್ದನು. ಆದರೆ, ತನ್ನ ಮಗ ಕಪ್ಪಗಿದ್ದಾನೆ, ಇವನು ನನಗೆ ಹುಟ್ಟಿದವನಲ್ಲ ಎಂಬ ಅಕಾರಣ ಅನುಮಾನದಿಂದ ವಿನೋದ್ ಕಳೆದ ಕೆಲವು ವರ್ಷಗಳಿಂದ ಪತ್ನಿ ಮತ್ತು ಮಗನಿಗೆ ಅತೀವ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದ. ಈ ಸಂಬಂಧ ಈ ಹಿಂದೆ ಹಲವು ಬಾರಿ ಹಿರಿಯರು ಸಂಧಾನ ನಡೆಸಿ ಬುದ್ಧಿ ಹೇಳಿದ್ದರೂ ವಿನೋದ್ ತನ್ನ ನಡವಳಿಕೆಯನ್ನು ಬದಲಿಸಿಕೊಂಡಿರಲಿಲ್ಲ.


