ಬೆಳಗಾವಿ: ಜಿಲ್ಲೆಯಲ್ಲಿ ಸರಣಿ ಮನೆಗಳ್ಳತನ ಎಸಗುತ್ತಿದ್ದ ಅಂತರರಾಜ್ಯ ಕಳ್ಳರ (Theft) ಜಾಲವನ್ನು ಭೇದಿಸುವಲ್ಲಿ ಪೊಲೀಸರು (Crime) ಯಶಸ್ವಿಯಾಗಿದ್ದಾರೆ.
ತರಕಾರಿ ಮಾರಾಟಗಾರರ ಸೋಗಿನಲ್ಲಿ ಬಂದು ಬೀಗ ಹಾಕಿದ ಮನೆಗಳನ್ನು ಗುರುತಿಸಿ, ಕಳ್ಳತನ ಮಾಡುತ್ತಿದ್ದ ಈ ಖದೀಮರು, ಬಂದ ಹಣದಲ್ಲಿ ಗೋವಾದ ಕ್ಯಾಸಿನೋಗಳಲ್ಲಿ ಮೋಜು ಮಾಡುತ್ತಿದ್ದರು ಎಂಬ ಆಘಾತಕಾರಿ ವಿಷಯ ಬಯಲಾಗಿದೆ.
ಬಂಧಿತ ಆರೋಪಿಗಳು ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ ಮೂಲದವರಾಗಿದ್ದಾರೆ. ಇವರು ಹಗಲು ಹೊತ್ತಿನಲ್ಲಿ ಬಡಾವಣೆಗಳಲ್ಲಿ ತರಕಾರಿ ಮಾರುವ ನೆಪದಲ್ಲಿ ಸಂಚರಿಸುತ್ತಾ, ಬೀಗ ಹಾಕಿರುವ ಮನೆಗಳ ಮಾಹಿತಿ ಸಂಗ್ರಹಿಸುತ್ತಿದ್ದರು. ರಾತ್ರಿಯಾಗುತ್ತಿದ್ದಂತೆ ಅಂತಹ ಮನೆಗಳ ಬೀಗ ಮುರಿದು ನಗ ನಗದು ದೋಚುತ್ತಿದ್ದರು. ಈ ಕುರಿತು ಬೆಳಗಾವಿಯ ಎಪಿಎಂಸಿ ಮತ್ತು ಶಹಾಪುರ ಪೊಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾಗಿದ್ದವು.
ಪ್ರಕರಣದ ಗಾಂಭೀರ್ಯ ಅರಿತ ಪೊಲೀಸರು ಎರಡು ಪ್ರತ್ಯೇಕ ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಿದ್ದರು.
ಎಪಿಎಂಸಿ ವ್ಯಾಪ್ತಿಯಲ್ಲಿ ಮಹಾರಾಷ್ಟ್ರ ಮೂಲದ ದೇವೇಂದ್ರ ವಾಘಮೋರೆ, ಸಚಿನ್ ಗೌಳಿ ಮತ್ತು ಕಪಿಲ್ ಜಾಧವ್ ಎಂಬುವವರನ್ನು ಬಂಧಿಸಲಾಗಿದೆ. ಇವರಿಂದ 4.71 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ಹಾಗೂ ಎರಡು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಶಹಾಪುರ ವ್ಯಾಪ್ತಿಯಲ್ಲಿ ಉತ್ತರ ಪ್ರದೇಶ ಮೂಲದ ಮಿಂಟು ವಿಶ್ವಾಸ್ ಎಂಬ ಕಿಂಗ್‌ಪಿನ್‌ನನ್ನು ಪೊಲೀಸರು ಸೆರೆಹಿಡಿದಿದ್ದಾರೆ. ಈತನಿಂದ ಬರೋಬ್ಬರಿ 44.86 ಲಕ್ಷ ರೂಪಾಯಿ ಬೆಲೆಬಾಳುವ 290 ಗ್ರಾಂ ಚಿನ್ನದ ಆಭರಣಗಳನ್ನು ಜಪ್ತಿ ಮಾಡಲಾಗಿದೆ.
ಬಂಧಿತರು ಕೇವಲ ಬೆಳಗಾವಿ ಮಾತ್ರವಲ್ಲದೆ ಶಿವಮೊಗ್ಗ, ಕಲಬುರ್ಗಿ ಸೇರಿದಂತೆ ಗೋವಾ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ಪೊಲೀಸರಿಗೂ ಬೇಕಾಗಿದ್ದರು. ಕಳ್ಳತನ ಮಾಡಿದ ಹಣದಲ್ಲಿ ಗೋವಾಕ್ಕೆ ತೆರಳಿ ಕ್ಯಾಸಿನೋಗಳಲ್ಲಿ ಮೋಜು ಮಸ್ತಿ ಮಾಡುವುದು ಇವರ ಹವ್ಯಾಸವಾಗಿತ್ತು.


