Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವರ್ಷಗಳೇ ಉರುಳಿದರೂ ಡಾಂಬರ್ ಕಾಣದ ರಸ್ತೆ.

ಕುರುಬರಪಲ್ಲಿ ರಾಚವಾರಪಲ್ಲಿ ಸಂಪರ್ಕ ರಸ್ತೆಯಲ್ಲಿ ನಿತ್ಯ ಸಂಕಷ್ಟ ಎದುರಿಸುತ್ತಿರುವ ಸಾರ್ವಜನಿಕರು

Advertisement


ಚೇಳೂರು: ತಾಲ್ಲೂಕಿನ ಸೋಮನಾಥಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುರುಬರಪಲ್ಲಿ - ರಾಚವಾರಪಲ್ಲಿ ಸಂಪರ್ಕ ರಸ್ತೆಗೆ ಡಾಂಬರು ಭಾಗ್ಯವಿಲ್ಲದ ಕಾರಣ ಕುರುಬರಪಲ್ಲಿ ಹಾಗೂ ಚಿನ್ನಗಾನಪಲ್ಲಿ ಗ್ರಾಮಸ್ಥರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಬೇಜವಾಬ್ದಾರಿತನಕ್ಕೆ ಹಿಡಿದ ಕೈಗನ್ನಡಿಯಂತೆ ಈ ರಸ್ತೆ ಗೋಚರಿಸುತ್ತಿದ್ದು, ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಕುರುಬರಪಲ್ಲಿ ಗ್ರಾಮದಿಂದ ಚಿನ್ನಗಾನಪಲ್ಲಿ ಗ್ರಾಮದವರೆಗಿನ ರಸ್ತೆಯನ್ನು ದುರಸ್ತಿ ಮಾಡುವ ನೆಪದಲ್ಲಿ ಅಧಿಕಾರಿಗಳು ಸುಮಾರು 5 ವರ್ಷಗಳ ಹಿಂದೆ ರಸ್ತೆಯನ್ನು ಅಗೆದು, ಜಲ್ಲಿಕಲ್ಲು ಸುರಿದು ಹೋಗಿದ್ದರು. ಆದರೆ, ಕಾಮಗಾರಿ ಆರಂಭವಾಗಿ ಅರ್ಧ ದಶಕ ಉರುಳಿದರೂ ಅಧಿಕಾರಿಗಳು ಮಾತ್ರ ಇತ್ತ ಮುಖ ಮಾಡಿಲ್ಲ. ಅರ್ಧಕ್ಕೆ ನಿಂತಿರುವ ಈ ಕಾಮಗಾರಿಯಿಂದಾಗಿ ರಸ್ತೆಯುದ್ದಕ್ಕೂ ಚೂಪಾದ ಜಲ್ಲಿಕಲ್ಲುಗಳು ಎದ್ದು ನಿಂತಿವೆ. ಇದು ವಾಹನ ಸವಾರರ ಪಾಲಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ.

news_1779717558_0_451.webp

 

ಇನ್ನು ಚಿನ್ನಗಾನಪಲ್ಲಿ ಗ್ರಾಮದಿಂದ ರಾಚವಾರಪಲ್ಲಿ ಮುಖ್ಯ ರಸ್ತೆಯವರೆಗಿನ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಈ ಮಾರ್ಗದಲ್ಲಿ ಸಂಪೂರ್ಣವಾಗಿ ಡಾಂಬರು ಕಿತ್ತು ಹೋಗಿದ್ದು, ರಸ್ತೆ ಯಾವುದು, ಗುಂಡಿ ಯಾವುದು ಎಂದು ಗುರುತಿಸುವುದೇ ಕಷ್ಟವಾಗಿದೆ. ಬೃಹತ್ ಗಾತ್ರದ ಗುಂಡಿಗಳಿಂದಾಗಿ ದ್ವಿಚಕ್ರ ವಾಹನ ಸವಾರರು ಆಯತಪ್ಪಿ ಬಿದ್ದು ಅದೆಷ್ಟೋ ಅಪಘಾತಗಳು ಸಂಭವಿಸಿವೆ. ಗರ್ಭಿಣಿಯರು, ವೃದ್ಧರು ಹಾಗೂ ಶಾಲಾ ಮಕ್ಕಳು ಈ ರಸ್ತೆಯಲ್ಲಿ ಓಡಾಡಲು ಭೀತಿ ಪಡುವಂತಾಗಿದೆ. ತೇಪೆ ಹಾಕುವ ಕನಿಷ್ಠ ಸೌಜನ್ಯವನ್ನೂ ಲೋಕೋಪಯೋಗಿ ಇಲಾಖೆ ತೋರುತ್ತಿಲ್ಲ ಎನ್ನುವುದು ಸಾರ್ವಜನಿಕರ ಪ್ರಮುಖ ಆರೋಪವಾಗಿದೆ.

news_1779717559_2_514.webp

 

ಸಾಮಾನ್ಯವಾಗಿ 5 ಕಿಲೋಮೀಟರ್ ದೂರವನ್ನು ಕ್ರಮಿಸಲು ವಾಹನಗಳಲ್ಲಿ ಗರಿಷ್ಠ 10 ರಿಂದ 15 ನಿಮಿಷ ಸಾಕು. ಆದರೆ, ಈ ನರಕಸದೃಶ ರಸ್ತೆಯಲ್ಲಿ ಕೇವಲ 5 ಕಿಲೋಮೀಟರ್ ಪ್ರಯಾಣಿಸಲು ಬರೋಬ್ಬರಿ ಒಂದು ಗಂಟೆ ಸಮಯ ಹಿಡಿಯುತ್ತಿದೆ.ಗುಂಡಿ ಹಾಗೂ ಜಲ್ಲಿಕಲ್ಲುಗಳಿಂದಾಗಿ ನಿತ್ಯವೂ ವಾಹನಗಳ ಟೈರ್ ಪಂಕ್ಚರ್ ಆಗುವುದು, ಎಂಜಿನ್ ಕೆಡುವುದು ಸಾಮಾನ್ಯವಾಗಿದೆ.ಕೆಲಸ ಕಾರ್ಯಗಳಿಗೆ, ಕಚೇರಿಗಳಿಗೆ ಮತ್ತು ಆಸ್ಪತ್ರೆಗಳಿಗೆ ಹೋಗುವವರು ಸಕಾಲಕ್ಕೆ ತಲುಪಲಾಗದೆ ನಿತ್ಯವೂ ಪರದಾಡುತ್ತಿದ್ದಾರೆ.

ಚುನಾವಣೆ ಬಂದಾಗ ಮತ ಕೇಳಲು ಸಾಲು ಸಾಲಾಗಿ ಬರುವ ಜನಪ್ರತಿನಿಧಿಗಳು, ಗೆದ್ದ ನಂತರ ಇತ್ತ ತಲೆಹಾಕಿಯೂ ಮಲಗುತ್ತಿಲ್ಲ. ಗ್ರಾಮಸ್ಥರು ಹಲವು ಬಾರಿ ಮನವಿ ಪತ್ರಗಳನ್ನು ನೀಡಿದರೂ, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. ವ್ಯವಸ್ಥೆಯ ಈ ಉದಾಸೀನ ಧೋರಣೆ ಸಾರ್ವಜನಿಕರ ತಾಳ್ಮೆಯ ಕಟ್ಟೆ ಒಡೆಯುವಂತೆ ಮಾಡಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ಕೂಡಲೇ ಕುರುಬರಪಲ್ಲಿ - ರಾಚವಾರಪಲ್ಲಿ ಸಂಪರ್ಕ ರಸ್ತೆಯ ಗುಂಡಿಗಳನ್ನು ಮುಚ್ಚಿ, ಸಂಪೂರ್ಣ ಡಾಂಬರೀಕರಣ ಮಾಡಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಉಭಯ ಗ್ರಾಮಗಳ ಗ್ರಾಮಸ್ಥರು ಒಟ್ಟಾಗಿ ರಸ್ತೆ ತಡೆ ನಡೆಸಿ, ಉಗ್ರ ಹೋರಾಟ ಮಾಡುವುದಾಗಿ ಹಾಗೂ ಮುಂಬರುವ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಎಚ್ಚರಿಸಿದ್ದಾರೆ.

 

ಪ್ರತಿ ನಿತ್ಯ ಸಾವು-ಬದುಕಿನ ಆಟ:
ಐದು ವರ್ಷಗಳ ಹಿಂದೆ ರಸ್ತೆ ಮಾಡ್ತೀವಿ ಅಂತ ಅಗೆದು ಜಲ್ಲಿಕಲ್ಲು ಸುರಿದು ಹೋದರು. ಆ ಚೂಪಾದ ಕಲ್ಲುಗಳ ಮೇಲೆ ಗಾಡಿ ಓಡಿಸಿ ಓಡಿಸಿ ನಮ್ಮ ವಾಹನಗಳ ಟೈರ್ ಕಥೆ ಮುಗಿದುಹೋಗಿದೆ. ವಾರಕ್ಕೆರಡು ಬಾರಿ ಪಂಕ್ಚರ್ ಆಗುತ್ತದೆ. ಕತ್ತಲಲ್ಲಿ ಈ ರಸ್ತೆಯಲ್ಲಿ ಬರುವುದು ಅಕ್ಷರಶಃ ಸಾವು-ಬದುಕಿನ ಆಟ.
- ಬಾವಾಜಾನ್,ಕುರುಬರಪಲ್ಲಿ ನಿವಾಸಿ.

ಈ ಅವ್ಯವಸ್ಥೆಗೆ ಯಾರು ಹೊಣೆ?:ವರ್ಷಗಳೇ ಉರುಳಿದರೂ ಡಾಂಬರ್ ಕಾಣದ ರಸ್ತೆ.

ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ:
ಸುಮಾರು ವರ್ಷಗಳಿಂದ ರಸ್ತೆಯನ್ನು ಹೀಗೆಯೇ ಬಿಟ್ಟಿದ್ದಾರಲ್ಲ, ಈ ಭಾಗದ ಜನಪ್ರತಿನಿಧಿಗಳು ಕಣ್ಣಿದ್ದು ಕುರುಡರಾಗಿದ್ದಾರೆಯೇ? ನಾವು ಸರ್ಕಾರಕ್ಕೆ ತೆರಿಗೆ ಕಟ್ಟುತ್ತಿಲ್ಲವೇ? ನಮಗೆ ಐಷಾರಾಮಿ ಸೌಲಭ್ಯ ಬೇಡ, ನೆಮ್ಮದಿಯಾಗಿ ಓಡಾಡಲು ಒಂದು ರಸ್ತೆ ಕೊಡಿ ಎಂದು ಹಲವು ವರ್ಷಗಳಿಂದ ಬೇಡುತ್ತಿದ್ದೇವೆ. ಇವರ ನಿರ್ಲಕ್ಷ್ಯಕ್ಕೆ ಮುಂಬರುವ ಚುನಾವಣೆಯಲ್ಲಿ ನಾವೆಲ್ಲರೂ ತಕ್ಕ ಪಾಠ ಕಲಿಸುತ್ತೇವೆ.
– ಕೃಷ್ಣಪ್ಪ,ಚಿನ್ನಗಾನಪಲ್ಲಿ.

ವರದಿ :ಯಾರಬ್. ಎಂ

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಶ್ವಕಪ್ ಫುಟ್‌ಬಾಲ್: ಕೊಲಂಬಿಯಾಗೆ ೩-೧ ರ ಜಯದೆಹಲಿಯಲ್ಲೂ ದೋಸೆಯ ಘಮ, ಘಮ15 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಎಫ್ ಡಿಎ ಗ್ಲೇನ್ ಫಿಲಿಪ್ಸ್ ಶತಕ: ಕಿವೀಸ್ ಉತ್ತಮ ಮೊತ್ತಮುಖ್ಯಮಂತ್ರಿಯಾದ ಬಳಿಕ ಮೊದಲ ಟಾಸ್ಕ್ ನಲ್ಲೇ ಗೆದ್ದು ಬೀಗಿದ ಡಿ.ಕೆ.ಶಿವಕುಮಾರ್ ಮತದಾನ ಹಕ್ಕು ಇದ್ದವರಿಗೆ ಮಾತ್ರ ಗ್ಯಾರಂಟಿ ಯೋಜನೆಗಳು : ಡಿ.ಕೆ.ಶಿವಕುಮಾರ್60ನೇ ವಯಸ್ಸಿನಲ್ಲಿ ಪೇಸ್ ಬುಕ್ ಲವ್ : 80 ವರ್ಷದ ವರನ ವರಿಸಿದ ಹಿರಿಯ ನಟಿ ಸ್ಯಾಂಡ್ ಮಾಫಿಯಾ : ಬಿಜೆಪಿ ಮುಖಂಡ ಸೇರಿ ಮೂವರನ್ನು ಕಾರಿನಲ್ಲೇ ಸುಟ್ಟ ಕಿರಾತಕರುವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಐದೂ ಅಭ್ಯರ್ಥಿಗಳು ಗೆಲುವು ಪಕ್ಕಾ : ಲಕ್ಷ್ಮೀ ಹೆಬ್ಬಾಳ್ಕರ್ಸದ್ಯಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಕಡಿಮೆಯಾಗುವುದಿಲ್ಲ : ಕೇಂದ್ರ ಸರ್ಕಾರ ಸ್ಪಷ್ಟನೆ