ಹಾವೇರಿ: ಇತ್ತೀಚೆಗೆ ನಿವೃತ್ತಿ ಹೊಂದಿದ ತನ್ನದೇ ಇಲಾಖೆಯ, ತನ್ನದೇ ಕಚೇರಿಯ ನಿವೃತ್ತ ನೌಕರನ ಗುಂಪು ವಿಮೆ ಮೊತ್ತದ ಬಿಲ್ ಮಾಡಿಕೊಡಲು ಕಚೇರಿಯಲ್ಲಿ ಸೋಮವಾರ 3,000 ರೂ. ಲಂಚ ಸ್ವೀಕರಿಸುತ್ತಿದ್ದ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ ದ್ವಿತೀಯ ದರ್ಜೆ ಸಹಾಯಕಿ ಅಕ್ಕಮ್ಮ ಎನ್.ಬಿದರೇರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಇಲ್ಲಿನ ಜಿಲ್ಲಾಡಳಿತ ಭವನದ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಪ್ರಥಮ ದರ್ಜೆ ಸಹಾಯಕ ಮಹದೇವ ಹನುಮಂತಪ್ಪ ಜೇಕಿನಕಟ್ಟಿ ಮೇ 31ರಂದು ಸೇವೆಯಿಂದ ನಿವೃತ್ತಿ ಹೊಂದಿದ್ದರು.
ತಮ್ಮ ಹೆಸರಿನಲ್ಲಿದ್ದ ಗುಂಪು ವಿಮೆ ಬಿಲ್ ಮಾಡಿಕೊಡಲು ಕೇಳಿಕೊಂಡಿದ್ದರು. ಬಿಲ್ ಮಾಡಿಕೊಡಲು ಅಕ್ಕಮ್ಮ 3,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಕಚೇರಿಯಲ್ಲಿ ಸೋಮವಾರ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದಾರೆ. ಜತೆಗೆ ಕೆಲಸ ಮಾಡಿ ನಿವೃತ್ತಿ ಹೊಂದಿದ ನೌಕರನಿಂದಲೂ ಲಂಚ ಪಡೆದ ಅಕ್ಕಮ್ಮನ ಈ ನಡೆಯಿಂದ ಆಕೆಯ ಮತ್ತು ಕಚೇರಿಯ ಕಾರ್ಯವೈಖರಿ ಬಗ್ಗೆ ಹಲವು ಅನುಮಾನಗಳು ಮೂಡುತ್ತಿವೆ.
ದಾವಣಗೆರೆ ಲೋಕಾಯುಕ್ತ ಎಸ್‌ಪಿ ಎಂ.ಎಸ್.ಕೌಲಾಪುರೆ ಮಾರ್ಗದರ್ಶನದಲ್ಲಿ ಹಾವೇರಿಯ ಪೊಲೀಸ್ ಉಪ ಅಧೀಕ್ಷಕ ಸಿ.ಮಧುಸೂದನ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ. ಆರೋಪಿಯನ್ನು ಬಂಧಿಸಿದ್ದು, ತನಿಖೆ ಮುಂದುವರೆದಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.


