ಉತ್ತರ ಪ್ರದೇಶದ ಆಗ್ರಾದಲ್ಲಿ ಪತಿಯನ್ನು ಕೊಲೆ ಮಾಡಿ, ಮನೆಯ ಬಾತ್‌ರೂಂ ನೆಲದಡಿ ಶವವನ್ನು ಹೂತು ಮುಚ್ಚಿಟ್ಟಿದ್ದ ಆರೋಪದ ಮೇಲೆ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಕೃತ್ಯಕ್ಕೆ ಇನ್ನೂ ಯಾರಾದರೂ ಸಹಕರಿಸಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮೃತರನ್ನು ಸುರೇಂದ್ರ ಶರ್ಮಾ ಎಂದು ಗುರುತಿಸಲಾಗಿದ್ದು, ಅವರು ಕಳೆದ ಸುಮಾರು 45 ದಿನಗಳಿಂದ ನಾಪತ್ತೆಯಾಗಿದ್ದರು.
ಹೊಸ ಸುಳಿವುಗಳ ಆಧಾರದ ಮೇಲೆ ಪೊಲೀಸರು ಮನೆಯ ಬಾತ್‌ರೂಂ ನೆಲವನ್ನು ಅಗೆದು ನೋಡಿದಾಗ, ಸಿಮೆಂಟ್ ಮತ್ತು ಪ್ಲಾಸ್ಟರ್ ಪದರದ ಕೆಳಗೆ ಹೂತಿದ್ದ ಶವ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಕೊಲೆಗೆ ಕಾರಣ ಇನ್ನೂ ನಿಗೂಢ
ಈ ಘಟನೆ ಆಗ್ರಾದ ಸಿಕಂದ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ದಹತೋರಾ ಪ್ರದೇಶದಲ್ಲಿ ನಡೆದಿದೆ. ಕೊಲೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.ಸುರೇಂದ್ರ ಶರ್ಮಾ ಅವರು ಪತ್ನಿ ರೂಬಿ ಹಾಗೂ ಇಬ್ಬರು ಪುತ್ರಿಯರೊಂದಿಗೆ ವಾಸಿಸುತ್ತಿದ್ದರು. ಅವರು ಕಾಣೆಯಾಗಿದ್ದ ಹಿನ್ನೆಲೆಯಲ್ಲಿ ಮೇ 26ರಂದು ಸಿಕಂದ್ರಾ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
ಕೀರ್‌ನಲ್ಲಿ ನಿದ್ರೆ ಮಾತ್ರೆ ಬೆರೆಸಿ ಕೊಲೆ?
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ದಂಪತಿಗೆ ಸುಮಾರು 16 ವರ್ಷಗಳ ಹಿಂದೆ ವಿವಾಹವಾಗಿತ್ತು.
ಘಟನೆ ನಡೆದ ದಿನ ರೂಬಿ ತನ್ನ ಇಬ್ಬರು ಪುತ್ರಿಯರನ್ನು ಪತಿಯ ಅಣ್ಣನ ಮನೆಗೆ ಕಳುಹಿಸಿದ್ದಳು. ಬಳಿಕ ಪತಿಗೆ ನಿದ್ರೆ ಮಾತ್ರೆ ಬೆರೆಸಿದ ಕೀರ್ (ಪಾಯಸ) ನೀಡಿದ್ದಾಳೆ ಎನ್ನಲಾಗಿದೆ.
ಸುರೇಂದ್ರ ಪ್ರಜ್ಞೆ ತಪ್ಪಿದ ನಂತರ ಕುತ್ತಿಗೆ ಹಿಸುಕಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಮರುದಿನ ಬೆಳಿಗ್ಗೆ ಬಾತ್‌ರೂಂನಲ್ಲಿ ಗುಂಡಿ ತೋಡಿ ಶವವನ್ನು ಹೂತು, ಅದರ ಮೇಲೆ ಸಿಮೆಂಟ್ ಹಾಕಿ ನೆಲವನ್ನು ಮುಚ್ಚಿದ್ದಳು ಎಂದು ತನಿಖೆಯಲ್ಲಿ ತಿಳಿದುಬಂದಿದೆ.


