ಡೆಹ್ರಾಡೂನ್: ಕೇಶರಾಶಿಯನ್ನು ಸೊಂಟದವರೆಗೆ ಬೆಳೆಸುವುದೇ ಇಂದಿನ ದಿನಗಳಲ್ಲಿ ಸವಾಲಿನ ಕೆಲಸ. ಆದರೆ ಉತ್ತರಾಖಂಡದ ಹಲ್ದ್ವಾನಿ ನಿವಾಸಿ ರೇಣು ಧರಿಯಾಲ್ ಬರೋಬ್ಬರಿ 8 ಅಡಿ 10 ಇಂಚು (271.50 ಸೆಂಟಿಮೀಟರ್) ಉದ್ದದ ಕೂದಲು ಬೆಳೆಸುವ ಮೂಲಕ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ (Guinness World Records) ಪುಟಕ್ಕೆ ಸೇರಿದ್ದಾರೆ.
ಪ್ರಸ್ತುತ ವಿಶ್ವದಲ್ಲೇ ಅತ್ಯಂತ ಉದ್ದನೆಯ ಕೂದಲು ಹೊಂದಿರುವ ಮಹಿಳೆ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.
ಹಲ್ದ್ವಾನಿಯಲ್ಲಿ ಗಿನ್ನೆಸ್ ಸಂಸ್ಥೆಯ ಪ್ರತಿನಿಧಿಗಳು ರೇಣು ಅವರ ಕೂದಲಿನ ಅಳತೆಯನ್ನು ಅಧಿಕೃತವಾಗಿ ಪರಿಶೀಲಿಸಿದ್ದು, ಈ ಹಿಂದೆ ಉಕ್ರೇನ್‌ನ ಅಲಿಯಾ ನಾಸಿರೋವಾ (8 ಅಡಿ 5 ಇಂಚು) ಹೆಸರಿನಲ್ಲಿದ್ದ ಜಾಗತಿಕ ದಾಖಲೆಯನ್ನು ರೇಣು ಧರಿಯಾಲ್ ಮುರಿದಿದ್ದಾರೆ.
ಉಕ್ರೇನ್ ಮಹಿಳೆಯ ದಾಖಲೆ ಧೂಳೀಪಟ
ಈ ಹಿಂದೆ ಉಕ್ರೇನ್ ದೇಶದ ಅಲಿಯಾ ನಾಸಿರೋವಾ (257.33 ಸೆಂಟಿಮೀಟರ್ – 8 ಅಡಿ 5.3 ಇಂಚು) ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ರೇಣು ಮುರಿದಿದ್ದಾರೆ.
ಗಿನ್ನೆಸ್ ಬಿಡುಗಡೆ ಮಾಡಿರುವ ಚಿತ್ರಗಳಲ್ಲಿ ಅವರ ಕೂದಲು ನೆಲದ ಮೇಲೆ ಹರಿದಾಡುತ್ತಿರುವುದು ಕಾಣಿಸುತ್ತದೆ. ದಿನನಿತ್ಯ ಅವರು ಕೂದಲನ್ನು ಜಡೆ ಕಟ್ಟಿ ಕಂಟ್ರೋಲ್‌ನಲ್ಲಿಟ್ಟುಕೊಳ್ಳುತ್ತಾರೆ.
ಯೂಟ್ಯೂಬರ್ ಹಾಗೂ ಕಂಟೆಂಟ್ ಕ್ರಿಯೇಟರ್ ಆಗಿರುವ ರೇಣು, 2015 ರಿಂದ ಅಂದರೆ ಕಳೆದ 10 ವರ್ಷಗಳಿಂದ ತಮ್ಮ ಕೂದಲನ್ನು ಒಮ್ಮೆಯೂ ಕತ್ತರಿಸಿಲ್ಲ. ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಉದ್ದನೆಯ ಕೂದಲನ್ನು ಸೌಂದರ್ಯ ಹಾಗೂ ಸಾಂಸ್ಕೃತಿಕ ಗುರುತಿನ ಸಂಕೇತವಾಗಿ ಕಾಣಲಾಗುತ್ತದೆ, ಇದೇ ತಮಗೆ ಸ್ಫೂರ್ತಿ ಎಂದು ಅವರು ತಿಳಿಸಿದ್ದಾರೆ


