ತುಮಕೂರು: ಜಿಲ್ಲೆಯ ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಶನಿವಾರ ಮಧ್ಯಾಹ್ನ ಭೀಕರ ಘಟನೆಯೊಂದು ಸಂಭವಿಸಿದೆ.
ಬೆಂಗಳೂರಿನಿಂದ ಯುವತಿಯೊಬ್ಬಳನ್ನು ಕಾರಿನಲ್ಲಿ ಕರೆತಂದಿದ್ದ ನಾಗೇಂದ್ರ ಎಂಬ ಯುವಕ, ಚಲಿಸುತ್ತಿದ್ದ ಕಾರಿನಲ್ಲೇ ನಾಡಬಾಂಬ್ ಸ್ಫೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪ್ರಾಥಮಿಕ ಮಾಹಿತಿ ಪ್ರಕಾರ ನಾಗೇಂದ್ರ, ಯುವತಿಯನ್ನು ಬೆಂಗಳೂರಿನಿಂದ ಕಿಡ್ನ್ಯಾಪ್ ಮಾಡಿಕೊಂಡು ಬಂದಿದ್ದ ಎನ್ನಲಾಗಿದೆ.
ಪ್ರಯಾಣದ ಮಧ್ಯೆ ಇಬ್ಬರ ನಡುವೆ ತೀವ್ರ ಜಗಳ ನಡೆದಿದ್ದು, ಆಕ್ರೋಶಗೊಂಡ ನಾಗೇಂದ್ರ ಯುವತಿಗೆ ಚಾಕುವಿನಿಂದ ಇರಿದಿದ್ದಾನೆ. ಈ ವೇಳೆ ಪ್ರಾಣಭಯದಿಂದ ಯುವತಿ ತಕ್ಷಣವೇ ಕಾರಿನ ಡೋರ್ ತೆರೆದು ಹೊರಗೆ ಜಿಗಿದಿದ್ದಾಳೆ.
ಸಹಾಯಕ್ಕೆ ಬಂದ ಚಾಲಕ; ಕ್ಷಣಾರ್ಧದಲ್ಲಿ ಕಾರು ಬ್ಲಾಸ್ಟ್
ಯುವತಿ ರಕ್ತಸಿಕ್ತ ಸ್ಥಿತಿಯಲ್ಲಿ ರಸ್ತೆಗೆ ಬೀಳುತ್ತಿದ್ದಂತೆ, ಕಾರಿನಲ್ಲಿದ್ದ ಚಾಲಕ ಆಕೆಯನ್ನು ರಕ್ಷಿಸಲು ಕೆಳಗಿಳಿದಿದ್ದಾನೆ. ಚಾಲಕ ಕೆಳಗಿಳಿಯುತ್ತಿದ್ದಂತೆಯೇ ನಾಗೇಂದ್ರ ಕಾರಿನ ಒಳಗಿನಿಂದ ಎಲ್ಲಾ ಡೋರ್‌ಗಳನ್ನು ಲಾಕ್ ಮಾಡಿಕೊಂಡಿದ್ದಾನೆ.
ಚಾಲಕ ಹಾಗೂ ಸ್ಥಳೀಯರು ಏನಾಗುತ್ತಿದೆ ಎಂದು ತಿಳಿಯುವ ಮುನ್ನವೇ, ನಾಗೇಂದ್ರ ಏಕಾಏಕಿ ಕಾರಿನೊಳಗೆ ನಾಡಬಾಂಬ್ ಬಳಸಿ ಸ್ಫೋಟಿಸಿಕೊಂಡಿದ್ದಾನೆ.
ಸ್ಫೋಟದ ತೀವ್ರತೆಗೆ ಕಾರು ಸಂಪೂರ್ಣವಾಗಿ ಹೊತ್ತಿ ಉರಿದಿದ್ದು, ನಾಗೇಂದ್ರ ಕಾರಿನೊಳಗೇ ಸುಟ್ಟು ಕರಕಲಾಗಿದ್ದಾನೆ.
ಇತ್ತ ಚಾಕು ಇರಿತ ಹಾಗೂ ಕಾರಿನಿಂದ ಜಿಗಿದ ರಭಸಕ್ಕೆ ಗಂಭೀರವಾಗಿ ಗಾಯಗೊಂಡಿರುವ ಯುವತಿಯನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಧ್ಯಾಹ್ನ ಸುಮಾರು 1.30ರ ವೇಳೆಗೆ ನಡೆದ ಈ ಭೀಕರ ಸ್ಫೋಟದ ಮಾಹಿತಿ ತಿಳಿಯುತ್ತಿದ್ದಂತೆಯೇ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ವೆಂಕಟ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರಿನೊಳಗೆ ನಾಗೇಂದ್ರನ ಮೃತದೇಹ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಘಟನಾ ಸ್ಥಳದಲ್ಲಿ ಪೊಲೀಸರು ತನಿಖೆ ಹಾಗೂ ಪರಿಶೀಲನೆ ನಡೆಸುತ್ತಿದ್ದಾಗ ಕಾರಿನ ಸುತ್ತಮುತ್ತ ಮತ್ತೊಂದು ಜೀವಂತ ನಾಡಬಾಂಬ್ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.
ಬಾಂಬ್ ಪತ್ತೆಯಾದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಕಳ್ಳಂಬೆಳ್ಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಚುರುಕುಗೊಳಿಸಲಾಗಿದೆ.


