ತಮ್ಮ ತಾಯಿ ಮಾಡುವ ರುಚಿ ರುಚಿಯಾಗಿ ಮಾಡುತ್ತಿದ್ದ ಬೆಣ್ಣೆ ದೋಸೆಯನ್ನೇ ಬಂಡವಾಳವಾಗಿಸಿಕೊಂಡು, ಇಂದು ತಿಂಗಳಿಗೆ ಬರೋಬ್ಬರಿ 12 ಲಕ್ಷ ರೂಪಾಯಿ ಆದಾಯ ಗಳಿಸುತ್ತಿರುವ ಇವರ ಕಥೆ ಯುವಜನತೆಗೆ ನಿಜಕ್ಕೂ ಸ್ಫೂರ್ತಿ.
ಸಾಮಾನ್ಯವಾಗಿ ಭಾರತೀಯ ಪೋಷಕರು ತಮ್ಮ ಮಕ್ಕಳು ಉನ್ನತ ವ್ಯಾಸಂಗ ಮಾಡಿ, ದೊಡ್ಡ ಹುದ್ದೆಗೇರಬೇಕು ಎಂದು ಕನಸು ಕಾಣುವುದು ಸಹಜ. ಗಣೇಶ್ ಸಾಠೆ ಪೋಷಕರು ಕೂಡ ತಮ್ಮ ಮಗ ಚಾರ್ಟರ್ಡ್ ಅಕೌಂಟೆಂಟ್ (CA) ಆಗಬೇಕು ಎಂದು ಬಯಸಿದ್ದರು. ಗಣೇಶ್ ಕೂಡ ಅದಕ್ಕಾಗಿ ಸಿದ್ಧತೆ ನಡೆಸುತ್ತಿದ್ದರು.
ಆದರೆ, ಅವರ ಮನಸ್ಸಿನಲ್ಲಿದ್ದದ್ದು ಮಾತ್ರ ತಮ್ಮ ತಾಯಿಯ ಅದ್ಭುತವಾದ ಬೆಣ್ಣೆ ದೋಸೆಯ ರುಚಿ. ಇದೇ ದೋಸೆ ರೆಸಿಪಿಯನ್ನ ಇಟ್ಟುಕೊಂಡು ಏಕೆ ಒಂದು ಹೊಸ ಬಿಸಿನೆಸ್ ಶುರು ಮಾಡಬಾರದು ಎಂಬ ಯೋಚನೆ ಗಣೇಶ್‌ಗೆ ಬಂತು. ಕೊನೆಗೆ ತಮ್ಮ ಮನಸ್ಸಿನ ಮಾತನ್ನು ಕೇಳಿದ ಅವರು, ಸಿಎ ಓದಿಗೆ ಗುಡ್ ಬೈ ಹೇಳಿ ತಾಯಿಯ ಬೆಣ್ಣೆ ದೋಸೆ ವ್ಯಾಪಾರಕ್ಕೆ ಇಳಿಯಲು ನಿರ್ಧರಿಸಿದರು.
ಯಾವುದೇ ಹೊಸ ವ್ಯವಹಾರವನ್ನ ಶುರು ಮಾಡುವುದು ಸುಲಭದ ಮಾತಲ್ಲ. ಗಣೇಶ್ 50,000 ರೂಪಾಯಿ ಸಾಲ ಮಾಡಿ, ಒಂದು ಹಳೆಯ ತಳ್ಳುವ ಗಾಡಿಯನ್ನ ಸಿದ್ಧಪಡಿಸಿದರು.
ಈ ವ್ಯವಹಾರದಲ್ಲಿ ಅವರ ಸಹೋದರಿ ಸಪ್ನಾ ಕೂಡ ಜೊತೆಯಾದರು. ಹಾಗೆಯೇ ಥಾಣೆಯಲ್ಲಿ ದಿ ಬೆಣ್ಣೆ ಎಂಬ ಹೆಸರಿನಲ್ಲಿ ದೋಸೆ ಅಂಗಡಿ ಕೂಡ ಶುರುವಾಯಿತು.
ಆದರೆ, ಆರಂಭದ ದಿನಗಳು ಅಂದುಕೊಂಡಷ್ಟು ಸುಲಭವಾಗಿ ಹೋಗಿರರಲಿಲ್ಲ. ಫಾಸ್ಟ್ ಫುಡ್ ಜಮಾನದಲ್ಲಿ ಪಿಜ್ಜಾ, ರೋಲ್ಸ್ ಹಾಗೂ ಮೊಮೊಸ್‌ನಂತಹ ಟ್ರೆಂಡಿಂಗ್ ಆಹಾರಗಳ ನಡುವೆ ಇವರ ಬೆಣ್ಣೆ ದೋಸೆಗೆ ಗ್ರಾಹಕರು ಬರುತ್ತಿರಲಿಲ್ಲ. ದಿನಕ್ಕೆ ಕೇವಲ 200 ರೂಪಾಯಿ ವ್ಯಾಪಾರವಾಗುತ್ತಿತ್ತು. ನಷ್ಟ ಹೆಚ್ಚಾಗುತ್ತಲೇ ಹೋಯಿತು. ಒಂದು ಹಂತದಲ್ಲಿ ಹತಾಶರಾದ ಅಣ್ಣ-ತಂಗಿ ಈ ದೋಸೆ ಗಾಡಿಯನ್ನೇ ಮುಚ್ಚಿಬಿಡಲು ನಿರ್ಧರಿಸಿದ್ದರು.
ಸೋಲೊಪ್ಪಿಕೊಂಡು ವ್ಯಾಪಾರ ಬಂದ್ ಮಾಡುವ ಮುನ್ನ ಕೊನೆಯದಾಗಿ ಒಂದು ಪ್ರಯತ್ನ ಪಡೋಣ ಎಂದುಕೊಂಡ ಗಣೇಶ್ ಮತ್ತು ಸಪ್ನಾ, ಸೋಷಿಯಲ್ ಮೀಡಿಯಾದ ಮೊರೆ ಹೋದರು.
ತಮ್ಮ ದೋಸೆ ಗಾಡಿಯನ್ನು ಹೊಸದಾಗಿ ವಿನ್ಯಾಸಗೊಳಿಸಿ, ಪ್ರತಿದಿನ ದೋಸೆ ಮಾಡುವ ವಿಡಿಯೋಗಳನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲು ಶುರು ಮಾಡಿದರು.
ಬೆಳಗ್ಗೆ ಎದ್ದು ತಾಯಿ ಮತ್ತು ಸಹೋದರಿ ತಾಜಾ ದೋಸೆ ಹಿಟ್ಟು ರುಬ್ಬಿ ಸಿದ್ಧಪಡಿಸಿದರೆ, ಗಣೇಶ್ ರುಚಿಯಾದ ಗರಿಗರಿಯಾದ ಬೆಣ್ಣೆ ದೋಸೆಗಳನ್ನ ಗ್ರಾಹಕರಿಗೆ ಬಡಿಸುತ್ತಿದ್ದರು. ಈ ವಿಡಿಯೋಗಳು ಮತ್ತು ಅವರ ಶ್ರಮ ನಿಧಾನವಾಗಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಲು ಶುರುವಾಯಿತು.
ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ 'ದಿ ಬೆಣ್ಣೆ' ಅಂಗಡಿಗೆ ಬರುವ ಗ್ರಾಹಕರ ಸಂಖ್ಯೆ ಏರಿಕೆಯಾಯಿತು. ಒಂದು ಕಾಲದಲ್ಲಿ ಗ್ರಾಹಕರಿಲ್ಲದೆ ಪರದಾಡುತ್ತಿದ್ದ ಅಂಗಡಿಯಲ್ಲಿ, ಈಗ ದೋಸೆ ಶುರುವಾದ ಕೇವಲ ಒಂದು ಗಂಟೆಯಲ್ಲೇ ಹಿಟ್ಟು ಖಾಲಿಯಾಗುವಷ್ಟು ವ್ಯಾಪಾರ ನಡೆಯುತ್ತಿದೆ. ಪ್ರತಿದಿನ ಸುಮಾರು 400ಕ್ಕೂ ಹೆಚ್ಚು ಜನ ಇವರ ಬೆಣ್ಣೆ ದೋಸೆ ಸವಿಯಲು ಬರುತ್ತಾರೆ. ಹಳೆಯ ತಳ್ಳುವ ಗಾಡಿ ಈಗ ಒಂದು ಖಾಯಂ ಮಳಿಗೆಯಾಗಿ ಬದಲಾಗಿದೆ.
ದಿನಕ್ಕೆ ಕೇವಲ 200 ರೂಪಾಯಿ ವ್ಯಾಪಾರ ಮಾಡುತ್ತಿದ್ದ ದಿ ಬೆಣ್ಣೆ ಇಂದು ಪ್ರತಿದಿನ 40,000 ರೂಪಾಯಿ ಸಂಪಾದನೆ ಮಾಡುತ್ತಿದೆ. ಅಂದರೆ, ತಿಂಗಳಿಗೆ ಬರೋಬ್ಬರಿ 12 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.


