ದಾವಣಗೆರೆ: ಚಪ್ಪಟೆ ಮೂಗಿನ ಸಮಸ್ಯೆಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳಲು ಬಂದಿದ್ದ ಯುವಕನೊಬ್ಬ ಶಸ್ತ್ರಚಿಕಿತ್ಸೆಗೂ ಮುನ್ನವೇ ನಿಗೂಢವಾಗಿ ಮೃತಪಟ್ಟಿರುವ ಆಘಾತಕಾರಿ ಘಟನೆ ಇಲ್ಲಿನ ನವೋದಯ ಆಸ್ಪತ್ರೆಯಲ್ಲಿ ಸಂಭವಿಸಿದೆ.
ನಗರದ ಕೆ.ಬಿ. ಬಡಾವಣೆಯ ನಿವಾಸಿ ಸೃಜನ್ ಮೃತ ದುರ್ದೈವಿ. ವೈದ್ಯರ ನಿರ್ಲಕ್ಷ್ಯ ಹಾಗೂ ಅನಸ್ತೀಷಿಯಾ ತಪ್ಪು ಪ್ರಮಾಣವೇ ಈ ಸಾವಿಗೆ ಕಾರಣ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.
ಮೂಗು ಚಪ್ಪಟೆಯಾಗಿದ್ದರಿಂದ ತನಗೆ ಉಸಿರಾಟದ ತೊಂದರೆ ಎದುರಾಗುತ್ತಿದೆ ಎಂದು ಸೃಜನ್ ಕುಟುಂಬಸ್ಥರ ಬಳಿ ಹೇಳಿಕೊಂಡಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ವೈದ್ಯರ ಸಲಹೆಯ ಮೇರೆಗೆ ಆತ ನವೋದಯ ಆಸ್ಪತ್ರೆಗೆ ದಾಖಲಾಗಿದ್ದನು.
ಆದರೆ, ಶಸ್ತ್ರಚಿಕಿತ್ಸಾ ಕೊಠಡಿಗೆ ಕರೆದೊಯ್ದ ಕೆಲವೇ ಸಮಯದಲ್ಲಿ ಆತ ಪ್ರಾಣ ಕಳೆದುಕೊಂಡಿದ್ದಾನೆ.
ಆಸ್ಪತ್ರೆಯ ಸಿಬ್ಬಂದಿ ನೀಡಿದ ಔಷಧಿಯ ಅಡ್ಡಪರಿಣಾಮ ಅಥವಾ ಅನಸ್ತೀಷಿಯಾದ ಓವರ್ ಡೋಸ್ ನಿಂದಲೇ ತನ್ನ ಮಗ ಮೃತಪಟ್ಟಿದ್ದಾನೆ ಎಂದು ಪೋಷಕರು ಕಣ್ಣೀರಿಟ್ಟಿದ್ದು, ಘಟನೆಯ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಮತ್ತೊಂದೆಡೆ ಪೋಷಕರ ಆರೋಪವನ್ನು ಆಸ್ಪತ್ರೆಯ ಆಡಳಿತ ಮಂಡಳಿ ಸಂಪೂರ್ಣವಾಗಿ ತಳ್ಳಿಹಾಕಿದೆ. ನಾವು ಇನ್ನೂ ಶಸ್ತ್ರಚಿಕಿತ್ಸೆಯನ್ನೇ ಆರಂಭಿಸಿರಲಿಲ್ಲ, ಹೀಗಾಗಿ ಓವರ್ ಡೋಸ್ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ವೈದ್ಯಕೀಯ ಸಿಬ್ಬಂದಿ ಸ್ಪಷ್ಟನೆ ನೀಡಿದ್ದಾರೆ.
ಸದ್ಯಕ್ಕೆ ಯುವಕನ ಸಾವು ನಿಗೂಢವಾಗಿದ್ದು, ಮರಣೋತ್ತರ ಪರೀಕ್ಷೆಯ ವೈದ್ಯಕೀಯ ವರದಿ ಹಾಗೂ ಪೊಲೀಸರ ತನಿಖೆಯ ನಂತರವಷ್ಟೇ ಈ ಸಾವಿನ ಹಿಂದಿನ ಅಸಲಿ ಸತ್ಯ ಹೊರಬರಬೇಕಿದೆ.


