ಬೆಂಗಳೂರು ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು 'ಟಂಟನ್' ಡೇಟಿಂಗ್ ಆಯಪ್‌ನಲ್ಲಿ ಪರಿಚಯವಾದ ಯುವತಿಯ ನಕಲಿ ಪ್ರಣಯದ ಬಲೆಗೆ ಬಿದ್ದಿದ್ದಾರೆ.
ಮದುವೆಯಾಗುವುದಾಗಿ ನಂಬಿಸಿ, ಆನ್‌ಲೈನ್ ಹೂಡಿಕೆ ಯೋಜನೆಯಲ್ಲಿ ಹಣ ತೊಡಗಿಸುವಂತೆ ಪ್ರೇರೇಪಿಸಿದ ಆಕೆ, ಯುವಕನಿಂದ 1.66 ಕೋಟಿ ರೂಪಾಯಿ ಜೊತೆ ಪರಾರಿಯಾಗಿದ್ದಾಳೆ.
ಸೈಬರ್ ಕ್ರೈಂ ಬಗ್ಗೆ ಎಷ್ಟೇ ಪೊಲೀಸರು, ಮಾಧ್ಯಮಗಳು ಬಾಯಿ ಬಾಯಿ ಬಡಿದುಕೊಂಡರೂ ಎಜುಕೇಟೆಡ್ ಎನ್ನಿಸಿಕೊಂಡಿರುವವರ ತಲೆಗೆ ಅದು ಹೋಗುವುದೇ ಇಲ್ಲ. ಹಣ ದುಪ್ಪಟ್ಟು ಮಾಡುವುದಾಗಿ ಹೇಳಿಯೋ, ಇಲ್ಲವೇ ಸುಂದರಿಯ ವೇಷದಲ್ಲಿ ಬಂದೋ ಸುಶಿಕ್ಷಿತ, ಶ್ರೀಮಂತರನ್ನೂ, ಯುವಕರನ್ನೂ ಮೂರ್ಖರನ್ನಾಗಿ ಮಾಡುವುದು ಹೆಚ್ಚುತ್ತಲೇ ಸಾಗಿದೆ.
ಅದರಲ್ಲಿಯೂ ಸುಂದರಿ ಎದುರಿಗೆ ಬಂದಳು ಎಂದರೆ, ಬೇರೆ ಹುಡುಗಿಯೇ ಸಿಗುವುದಿಲ್ಲವೇನೋ ಎನ್ನುವಂತೆ ಈ ಕೋಟ್ಯಧಿಪತಿ ಯುವಕರು ಆಕೆಯ ಹಿಂದೆ ಬೀಳುವುದು ಮಾತ್ರ ಅತ್ಯಂಥ ಅಚ್ಚರಿಯ ವಿಷಯವೂ ಆಗಿದೆ.
ಅದೇ ರೀತಿ ಇದೀಗ ಬೆಂಗಳೂರು ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬಾತ, ಡೇಟಿಂಗ್ ಆಯಪ್ ಮೂಲಕ ನಕಲಿ ಪ್ರಣಯ ಸಂಬಂಧದಲ್ಲಿ ಸಿಲುಕಿಕೊಂಡು 1.66 ಕೋಟಿ ಕಳೆದುಕೊಂಡಿದ್ದಾನೆ! ಭಾವನೆಗಳು ಮತ್ತು ನಂಬಿಕೆಯನ್ನು ಬಳಸಿಕೊಂಡು ಶ್ರೀಮಂತ ಯುವಕರನ್ನು ಟಾರ್ಗೆಟ್ ಮಾಡುವ, ಅವರ ಹಣ ಲಪಟಾಯಿಸಿಕೊಂಡು ಹೋಗುವ ಹಲವಾರು ಘಟನೆಗಳ ನಡುವೆ ಇದೂ ಒಂದು ಘಟನೆ ನಡೆದಿದೆ.


